ಫೆ.28, ಮಾ.1ಕ್ಕೆ ಕರ್ನಾಟಕ ಶೂಟಿಂಗ್ ಲೀಗ್: ಎಂಟು ತಂಡಗಳು ಭಾಗಿ

  ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆ ಗೌರವ ಕಾರ್ಯದರ್ಶಿ ಜಿ. ಸುಶೀಲ್, ಖಜಾಂಚಿ ಮುರಳಿ ವಿ, ಹಾಗೂ ಇತರರು
ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆ ಗೌರವ ಕಾರ್ಯದರ್ಶಿ ಜಿ. ಸುಶೀಲ್, ಖಜಾಂಚಿ ಮುರಳಿ ವಿ, ಹಾಗೂ ಇತರರು
Published on
ಬೆಂಗಳೂರು: ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆ (ಕೆಎಸ್‌ಆರ್‌ಎ)ವತಿಯಿಂದ ಐಪಿಎಲ್ ಮಾದರಿಯ ಶೂಟಿಂಗ್ ಲೀಗ್ ಆಫ್ ಕರ್ನಾಟಕ ಟೂರ್ನಿ ಆಯೋಜಿಸಲಾಗಿದ್ದು, ಉದ್ಘಾಟನಾ ಆವೃತ್ತಿಯೂ ಫೆ.28 ಮತ್ತು ಮಾರ್ಚ್ 1ರಂದು ನಿಗದಿಪಡಿಸಲಾಗಿದೆ. ಲೀಗ್‌ಗೆ ಪೂರ್ವಭಾವಿಯಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೃಥಾರ್ಥ್ ದೇವಾಂಗ್ ಸವ್ಯಸಾಚಿ (₹44 ಲಕ್ಷ) ಅತಿ ದುಬಾರಿ ಶೂಟರ್ ಎನಿಸಿ, ಬೆಂಗಳೂರು ಬ್ರಿಗೇಡ್ ಫ್ರಾಂಚೈಸಿ ಪಾಲಾದರು.
ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕ್ಯಾಲಿಬರ್ ಕ್ಯಾಪಿಟಲ್ಸ್, ಟ್ರಿಗರ್ ಟ್ಯಾಕ್ಟಿಶಿಯನ್ಸ್, ಬೆಂಗಳೂರು ಬ್ರಿಗೇಡ್, ರೆಡ್ರಮ್, ಮಂಗಳೂರು ರಾಪ್ಟರ್ಸ್‌, ಟಾಪ್‌ಗನ್ಸ್, ಸ್ನೈಪರ್ ಸ್ಕ್ವಾಡ್ ಹಾಗೂ ಹುಬ್ಬಳ್ಳಿ ಶೂಟಿಂಗ್ ಒಟ್ಟು ಎಂಟು ತಂಡಗಳ ಫ್ರಾಂಚೈಸಿಗಳು ಭಾಗವಹಿಸಿದ್ದವು. 136 ನೋಂದಾಯಿತ ಶೂಟರ್‌ಗಳಲ್ಲಿ ಆಟಗಾರರಂತೆ ಒಟ್ಟು 88 ಆಟಗಾರರು ಬಿಕರಿಯಾದರು. ಮಹಿಳಾ ಶೂಟರ್ ಅನುಷ್ಕಾ ಎಚ್ ತೋಕುರ್ (₹43 ಲಕ್ಷ, ಬೆಂಗಳೂರು ಬ್ರಿಗೇಡ್), ಮಮಿತ್ ಗೌಡ (₹42 ಲಕ್ಷ, ಮಂಗಳೂರು ರಾಪ್ಟರ್ಸ್‌), ಓಮರ್ ಬಿನ್ ಜಂಗ್ (₹41ಲಕ್ಷ, ಹುಬ್ಬಳ್ಳಿ ಸ್ಟಾರ್ಸ್‌), ಶ್ರವಣ್‌ಎಂ ಶಶಿಧರ್ (₹35 ಲಕ್ಷ, ಟಾಪ್‌ಗನ್ಸ್) ಹರಾಜಿನಲ್ಲಿ ಗರಿಷ್ಠ ಬಿಡ್ ಪಡೆದ ಅಗ್ರ ಐವರು ಶೂಟರ್‌ಗಳಾಗಿದ್ದಾರೆ. ಪ್ರತಿ ಫ್ರಾಂಚೈಸಿ 1.75 ಕೋಟಿ ರೂ. ಬಜೆಟ್ ಮಿತಿ ಹೊಂದಿದ್ದು, ಶೂಟರ್‌ಗಳಿಗೆ ಕನಿಷ್ಠ 8 ಲಕ್ಷ ಮೂಲಬೆಲೆ ನಿಗದಿಪಡಿಸಲಾಗಿತ್ತು.
10ಮೀ.ಏರ್ ಪಿಸ್ತೂಲ್,10ಮೀ.ಏರ್ ರೈಫಲ್ (ಪುರುಷರು ಮತ್ತು ಮಹಿಳೆಯರು), 25ಮೀ. ಪಿಸ್ತೂಲ್, 50ಮೀ. ರೈಫಲ್, ಟ್ರ್ಯಾಪ್, ಸ್ಕೀಟ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಟೂರ್ನಿಯಲ್ಲಿ ಗರಿಷ್ಠ ಅಂಕ ಕಲೆಹಾಕುವ ತಂಡ 4 ಲಕ್ಷ ರೂ. ಬಹುಮಾನ ಮೊತ್ತದೊಂದಿಗೆ ಚಾಂಪಿಯನ್ ಎನಿಸಲಿದೆ. ರನ್ನರ್‌ಅಪ್ ಹಾಗೂ ಮೂರನೇ ಸ್ಥಾನಿ ತಂಡಗಳು ಕ್ರಮವಾಗಿ ₹2 ಲಕ್ಷ, ₹1.5 ಲಕ್ಷ ಪಡೆಯಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net