ಹುಲ್ಲು ನೀರಿಗಾಗಿ ಒತ್ತಾಯಿಸಿ ಶಿವೋತ್ಸವ

Shivotsava demands grass and water
Shivotsava demands grass and water
Published on
ಶಿರಾ: ಶಿವರಾತ್ರಿ ಅಂಗವಾಗಿಜುಂಜಪ್ಪನ ಗುಡ್ಡೆ ಹೊಸಹಳ್ಳಿ ಕೆರೆ ಕೋಡಿಯ ಜೂಲ್​ ನಾಯಿ ಗುಡ್ಡೆ ಬಳಿ ಈ ಬಾರಿ ಶಿವೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶಿರಾ ಸೀಮೆ ಸಾಂಸತಿಕವೇದಿಕೆ ಅಧ್ಯಕ್ಷ, ರಂಗಕರ್ಮಿ, ನಟ ಗೋಮಾರದಹಳ್ಳಿ ಪಿ.ಮಂಜುನಾಥ್​ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜುಂಜಪ್ಪನ ಇತಿಹಾಸ ಇರುವ ಕಳುವರಹಳ್ಳಿ ಸುತ್ತಮುತ್ತಲ ಕೆರೆಗಳಿಗೆ ನೀರು ತುಂಬಿಸುವುದು, ಶಾಶ್ವತವಾದ ಗೋಶಾಲೆ ನಿರ್ಮಿಸಿ, ಪಶು ಪಾಲಕರಿಗೆ ಸಹಕಾರ ನೀಡುವುದು ಸೇರಿದಂತೆ ತುಮಕೂರು ಜಿಲ್ಲೆಯ ಜನಪದ ರಂಗಾಯಣವನ್ನು ಜುಂಜಪ್ಪನ ಗುಡ್ಡೆಯ ಬಳಿ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಈ ಬಾರಿಯ ಶಿವೋತ್ಸವ ನಡೆಸಲಾಗುತ್ತಿದೆ. ರಾಜ್ಯದ ಸಾಹಿತಿಗಳು, ರಂಗಭೂಮಿ ಕಲಾವಿದರು, ಸಿನಿಮಾ ನಟರು ಸೇರಿದಂತೆ ಹೆಚ್ಚಿನ ಜನ ಆಗಮಿಸುವ ನಿರೀಕ್ಷೆ ಇದೆ ಎಂದರು.
ಕರಿಯಣ್ಣ ಮಾತನಾಡಿ, ಜುಂಜಪ್ಪನ ಮಹಿಮೆ ಇಂದು ರಾಜ್ಯ,ಹೊರರಾಜ್ಯ, ದೇಶಗಳಲ್ಲಿ ಜನಜನಿತವಾಗುತ್ತಿದೆ. ಜೀವ ಸಂಕುಲ ಉಳಿಸಲು ಅಗತ್ಯವಾಗಿರುವ ಹುಲ್ಲು ನೀರಿಗಾಗಿ ಆಗ್ರಹಿಸಿ ಹಾಗೂ ಪಶುಪಾಲಕರ ಬೇಡಿಕೆಗಳನ್ನು ಈಡೇರಿಸುವಂತೆ ಶಿವನಲ್ಲಿ ಪ್ರಾರ್ಥಿಸಲು ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಳುವರಹಳ್ಳಿ ಕರಿಯಜ್ಜ ಅವರ ಕಥನ ಗಾಯನ ಮತ್ತು ಕುಂಬಾರಹಳ್ಳಿ ಚಿತ್ತಯ್ಯರವರಿಂದ ಗಣೆ ವಾದನ, ರಾತ್ರಿ 9 ರಿಂದ 10 ರವರೆಗೆ ಮಡಪ್ಪ ಸ್ವಾಮಿ ಕೋಲಾಟ ತಂಡದಿಂದ ಕೋಲಾಟ ಜಾನಪದ ಕುಣಿತ, ರಾತ್ರಿ 10ರಿಂದ 12 ರವರೆಗೆ ಜಾನಪದ ವಿದ್ವಾಂಸ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಅವರಿಂದ ಐತಿಹ್ಯದ ವಿಚಾರಗೋಷ್ಠಿ ಇರಲಿದೆ.
ರಾತ್ರಿ 2 ರಿಂದ ಮುಂಜಾನೆ 6 ರ ವರೆಗೆ ಧಾರವಾಡ ರಂಗಾಯಣದ ಕಲಾವಿದರು ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್​ ಕಂದಗಲ್ಲ ಭಾರತ ಎಂಬ ನಾಟಕ ಪ್ರದರ್ಶನ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net