ಕೆಆರ್ಐಡಿಎಲ್ ಸಿರಾ ಉಪವಿಭಾಗದಿಂದ ತಯಾರಿಸಿದ ಅಂದಾಜು ಪಟ್ಟಿಯ ಪ್ರಕಾರ, ಪೋಚಕಟ್ಟೆ ಮುಖ್ಯರಸ್ತೆಯಿಂದ ಶಿಡ್ಲಕಟ್ಟೆ ಪರಿಶಿಷ್ಟರ ಕಾಲನಿಗೆ ಸಂಪರ್ಕಿಸುವ ಸುಮಾರು 342 ಮೀಟರ್ ಉದ್ದ, 4 ಮೀಟರ್ ಅಗಲ ಮತ್ತು 0.15 ಮೀಟರ್ ದಪ್ಪದ ಸಿಮೆಂಟ್ ರಸ್ತೆ ನಿರ್ಮಿಸಬೇಕಾಗಿದೆ. ಈ ಕಾಮಗಾರಿಯಲ್ಲಿ ನೆಲವನ್ನು ಸಡಿಲಗೊಳಿಸಿ ಸಮಮಾಡುವುದು, ಜಲ್ಲಿ ಮತ್ತು ಮಣ್ಣನ್ನು ಹಾಕಿ ರೋಲರ್ ಮೂಲಕ ಬಿಗಿ ಮಾಡುವುದು, ನಂತರ ವೆಟ್ ಮಿಕ್ಸ್ ಮ್ಯಾಕಡಂ (ಡ್ಲ್ಯುಎಂಎಂ) ಹಾಕಿ ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಬೇಕು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ ಸ್ಥಳದಲ್ಲಿ ನಡೆಯುತ್ತಿರುವ ಕಾಮಗಾರಿ ಸಂಪೂರ್ಣವಾಗಿ ಈ ಅಂದಾಜು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.