ಶಾಂತರಸರು ಸಾಹಿತಿ ಮಾತ್ರವಲ್ಲ ಹೋರಾಟದ ಧ್ವನಿ

ಕಲಬುರಗಿಯಲ್ಲಿ ರಂಗಾಯಣ ಸೋಮವಾರ ಆಯೋಜಿಸಿದ್ದ ಸಣ್ಣಗೌಡಸಾನಿ ನಾಟಕ ಪ್ರದರ್ಶನಕ್ಕೆ ಮಾಹಿತಿ ಆಯೋಗ ಆಯುಕ್ತ ಬಿ.ವೆಂಕಟಸಿಂಗ್​ ಚಾಲನೆ ನೀಡಿದರು. ಡಾ.ಸುಜಾತಾ ಜಂಗಮಶೆಟ್ಟಿ, ಶೇಷಮೂರ್ತಿ ಅವಧಾನಿ, ಮಹಾಂತೇಶ ನವಲಕಲ್​, ಮಹಾಂತೇಶ ಗಜೇಂದ್ರಗಡ, ಪ್ರವಿಣ ರೆಡ್ಡಿ ಗುಂಜನಹಳ್ಳಿ ಇತರರಿದ್ದರು.
ಕಲಬುರಗಿಯಲ್ಲಿ ರಂಗಾಯಣ ಸೋಮವಾರ ಆಯೋಜಿಸಿದ್ದ ಸಣ್ಣಗೌಡಸಾನಿ ನಾಟಕ ಪ್ರದರ್ಶನಕ್ಕೆ ಮಾಹಿತಿ ಆಯೋಗ ಆಯುಕ್ತ ಬಿ.ವೆಂಕಟಸಿಂಗ್​ ಚಾಲನೆ ನೀಡಿದರು. ಡಾ.ಸುಜಾತಾ ಜಂಗಮಶೆಟ್ಟಿ, ಶೇಷಮೂರ್ತಿ ಅವಧಾನಿ, ಮಹಾಂತೇಶ ನವಲಕಲ್​, ಮಹಾಂತೇಶ ಗಜೇಂದ್ರಗಡ, ಪ್ರವಿಣ ರೆಡ್ಡಿ ಗುಂಜನಹಳ್ಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಹಿತಿ ಆಯೋಗ ಆಯುಕ್ತ ವೆಂಕಟಸಿಂಗ್​ ಸ್ಮರಣೆ
  • ಸಣ್ಣಗೌಡಸಾನಿ ನಾಟಕ ಪ್ರದರ್ಶನಕ್ಕೆ ಚಾಲನೆ
ಕಲಬುರಗಿ: ನಾಡೋಜ ಡಾ.ಶಾಂತರಸರು ಸಾಹಿತಿ ಮಾತ್ರವಲ್ಲ, ನೆಲ-ಜಲ, ಭಾಷೆ ಮತ್ತು ಪರಿಸರದ ಪರ ಧ್ವನಿ ಎತ್ತಿದ ಹೋರಾಟಗಾರರಾಗಿದ್ದರು ಎಂದು ಮಾಹಿತಿ ಆಯೋಗ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟ್​ಸಿಂಗ್​ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಂಗಾಯಣ ಸಹಯೋಗದಡಿ ನಾಡೋಜ ಡಾ.ಶಾಂತರಸರ ಸಣ್ಣಗೌಡಸಾನಿ ನಾಟಕ ಪ್ರದರ್ಶನಕ್ಕೆ ಡಾ.ಎಸ್​.ಎಂ. ಪಂಡಿತ ರಂಗಮಂದಿರದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶಾಂತರಸರದು ಮತ್ತು ನನ್ನೂರು ಅಕ್ಕಪಕ್ಕದಲ್ಲಿದ್ದು, ಬಾಲ್ಯದಿಂದಲೂ ಒಡನಾಟ ಹೊಂದಿದ್ದೆ. 1988ರಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ವೇಳೆ ಶಾಂತರಸರ ಜತೆ ನಿಕಟ ಸಂಪರ್ಕವಿತ್ತು. ಆಗಲೇ ಅವರಲ್ಲಿದ್ದ ಪ್ರತಿಭಟನಾ ಮನೋಭಾವ, ಸಾಮಾಜಿಕ ಕಳಕಳಿ ಹಾಗೂ ಅನ್ಯಾಯದ ವಿರುದ್ಧ ಹೋರಾಡುವ ಗುಣ ಹತ್ತಿರದಿಂದ ಕಂಡಿದ್ದೇನೆ ಎಂದು ಸ್ಮರಿಸಿದರು.
ನೆಲ-ಜಲ ಹಾಗೂ ಭಾಷೆ ವಿಚಾರದಲ್ಲಿ ರಾಜಿಯಾಗದ ನಿಲುವು ಹೊಂದಿದ್ದ ಶಾಂತರಸರು ಈ ಭಾಗಕ್ಕೆ ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ ಸೇರಿ ಯಾವುದೇ ಕ್ಷೇತ್ರದಲ್ಲಿ ಅನ್ಯಾಯವಾದರೂ ಧ್ವನಿ ಎತ್ತುತ್ತಿದ್ದರು. ಸ್ವಂತ ನಿವೇಶನ ಮಾರಿ ಬಂಡಾಯದ ಚಳವಳಿಗಳಿಗೆ ಬೆಂಬಲ ನೀಡಿದ ವಿಶಿಷ್ಟ ವ್ಯಕ್ತಿತ್ವ ಅವರದಾಗಿತ್ತು ಎಂದರು.
ಬಾಗಲಕೋಟೆ ರಂಗಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ, ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿ, ಮಹಾಂತೇಶ ನವಲಕಲ್​, ನಾಟಕದ ರಂಗಪಠ್ಯ, ವಸ್ತು ವಿನ್ಯಾಸ ಹಾಗೂ ನಿರ್ದೇಶಕ ಪ್ರವಿಣರೆಡ್ಡಿ ಗುಂಜನಹಳ್ಳಿ ಇದ್ದರು.

ಗಜಲ್​, ರಂಗಗೀತೆಗಳ ಗಾಯನ

ಸಣ್ಣಗೌಡಸಾನಿ ನಾಟಕದ ರಂಗಗೀತೆಗಳು ಹಾಗೂ ಶಾಂತರಸರ ಗಜಲ್​ಗಳನ್ನು ಧಾರವಾಡದ ರಾವ ಕಮ್ಮಾರ ಮತ್ತು ತಂಡ ಗಾಯನ ರೂಪದಲ್ಲಿ ಪ್ರಸ್ತುತಪಡಿಸಿತು. ನಾಟಕದ ರಂಗಸಜ್ಜಿಕೆ ಮತ್ತು ರಂಗಪರಿಕರಗಳ ಜವಾಬ್ದಾರಿ ರಾಜಕುಮಾರ ಎಸ್​.ಕೆ. ವಹಿಸಿದ್ದು, ಬೆಳಕು ಹಾಗೂ ಸಹ ನಿರ್ದೇಶನವನ್ನು ಶ್ರೀನಿವಾಸ ದೋರನಹಳ್ಳಿ ನಿರ್ವಹಿಸಿದರು.
"

1992ರಲ್ಲಿ ಘೋಷಣೆಯಾದ ರಾಜ್ಯೋತ್ಸವ ಪ್ರಶಸ್ತಿ ತಿರಸ್ಕರಿಸುವ ಮೂಲಕ ತಮ್ಮ ನಿಲುವಿನಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಶಾಂತರಸರು ತೋರಿಸಿಕೊಟ್ಟಿದ್ದರು. ಜನಪರ ವಿಚಾರಗಳಿಗಾಗಿ ವಿಭಿನ್ನ ಚಳವಳಿ ರೂಪಿಸಿ ನಾಡು-ನುಡಿ ಮತ್ತು ಜನರ ಹಿತಕ್ಕಾಗಿ ಸದಾ ಬದ್ಧರಾಗಿದ್ದರು.

— > ಬಿ.ವೆಂಕಟಸಿಂಗ್​ ಆಯುಕ್ತ, ಮಾಹಿತಿ ಆಯೋಗ ಕಲಬುರಗಿ ಪೀಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net