ಶಾಂತಾ ಹೊಸಮನಿ ಸಿಐಡಿ ಮುಂದೆ ದಿಢೀರ್ ಪ್ರತ್ಯಕ್ಷ

shanta hosamani
shanta hosamani
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಾಹ್ನ 12ಗಂಟೆಯಿಂದ ಸತತ 8ಗಂಟೆ ವಿಚಾರಣೆ
  • ಪರೀಕ್ಷಾ ಅಕ್ರಮದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿದ ಆರೋಪಿ
  • ಒಂದೂವರೆ ತಿಂಗಳಿಂದ ನಾಪತ್ತೆಯಾಗಿದ್ದ ಹೊಸಮನಿ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದಲ್ಲಿ ನಡೆದಿರುವ ಪಶುವೈದ್ಯಾಧಿಕಾರಿ ಪರೀಕ್ಷಾ ಹಗರಣದ ಸಂಬಂಧ ಒಂದೂವರೆ ತಿಂಗಳಿಂದ ನಾಪತ್ತೆಯಾಗಿದ್ದ ಆಯೋಗದ ಸದಸ್ಯೆ ಶಾಂತಾ ಹೊಸಮನಿ ಕೊನೆಗೂ ಸಿಐಡಿ ಮುಂದೆ ಗುರುವಾರ ಹಾಜರಾಗಿದ್ದಾರೆ.
ತಮ್ಮವಿರುದ್ಧ ದಾಖಲಾಗಿದ್ದ ಪ್ರಕರಣದ ಕುರಿತು ನಿರೀಕ್ಷಣಾ ಜಾಮೀನಿಗೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಪರೀಕ್ಷಾ ಅಕ್ರಮದ ಕುರಿತು ಇ.ಡಿ, ಸಿಐಡಿ ಎರಡು ತನಿಖಾ ಸಮಸ್ಥೆಗಳು ಆಗಸ್ಟ್ 18ರಿಂದ ವಿವಿಧ ಕಡೆ ದಾಳಿ ನಡೆಸಿದ್ದವು. ಪರೀಕ್ಷಾ ಅಕ್ರಮದಲ್ಲಿ ಶಾಂತಾ ಹೊಸಮನಿ ವಿರುದ್ಧ ಗಂಭೀರ ಆರೋಪ ಕೇಳಿಬರುತ್ತಿದಂತೆ ಆಗಸ್ಟ್ 19ರಿಂದ ತಲೆಮರೆಸಿಕೊಂಡಿದ್ದರು.
ವಿಚಾರಣೆಗೆ ಹಾಜರಾಗುಂತೆ ಸಿಐಡಿ ಅಧಿಕಾರಿಗಳು ಎರಡು ನೋಟಿಸ್ ಜಾರಿ ಮಾಡಿದ್ದರು. ಆದರೆ, ಶಾಂತಾ ಹೊಸಮನಿ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸೇರಿ ಹೊರ ರಾಜ್ಯಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದರು. ಆರೋಪಿ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಅರಿತ ಸಿಐಡಿ ಲುಕ್‌ಔಟ್ ನೋಟಿಸ್ ಕೂಡ ಜಾರಿ ಮಾಡಿದ್ದರು.

ತಡರಾತ್ರಿವರೆಗೆ ಸಿಐಡಿ ಡ್ರಿಲ್:

ಆಯೋಗದ ಮಾಜಿ ಅಧ್ಯಕ್ಷರ ಜತೆ ನಂಟು ಹಾಗೂ ಪಶುವೈದ್ಯಾಧಿಕಾರಿ 400 ಹುದ್ದೆಗಳ ನೇಮಕಾತಿ ಹಾಗೂ ಹಿಂದೆ ನಡೆದಿರುವ 2-3 ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿರುವ ಆರೋಪದ ಮೇಲೆ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8ಗಂಟೆವರೆಗೆ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಪ್ರಶ್ನೆಗಳ ಸುರಿಮಳೆ ಮಾಡಿರುವ ಅಧಿಕಾರಿಗಳ ಮುಂದೆ ಆರೋಪಿ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿಲ್ಲ ಎಂದು ತನಿಖಾ ಮೂಲಗಳು ತಿಳಿಸಿವೆ.

phone ಕರೆ ಸಾಕ್ಷ್ಯ:

ಪರೀಕ್ಷಾ ಅಕ್ರಮದಲ್ಲಿ ಅಭ್ಯರ್ಥಿಗಳೊಂದಿಗೆ phone ಕರೆಯಲ್ಲಿ ಮಾತನಾಡಿರುವ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಶಾಂತಾ ಹೊಸಮನಿಗೆ ಸಿಐಡಿ ವಿಚಾರಣೆ ನಡೆಸಿದೆ. ಅಭ್ಯರ್ಥಿ ಮಮಿತಾ ಎಂಬುವರ ಜತೆ ಮೂರು ಬಾರಿ ಫೋನ್ ಮೂಲಕ ಮಾತುಕತೆ ನಡೆಸಿರುವುದು. ಮಾಜಿ ಅಧ್ಯಕ್ಷರ ಜತೆ ನಂಟು ಹೊಂದಿ ಹಣಕಾಸಿನ ವ್ಯವಹಾರ ನಡೆಸಿರುವ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸಿದರು.
ಈ ಹಿಂದೆ ನಡೆದಿದ್ದ ನೇಮಕಾತಿ ವೇಳೆ ಸಂದರ್ಶನಕ್ಕೂ ಮೊದಲೇ ಅಭ್ಯರ್ಥಿಗಳ ಜತೆ ಸಂಭಾಷಣೆ ನಡೆಸುವ ಆರೋಪ ಇವರ ಮೇಲಿದೆ. ಅದರ ಬಗ್ಗೆಯೂ ಸಿಐಡಿ ಪ್ರಶ್ನೆಗೆ ಉತ್ತರ ನೀಡಿಲ್ಲ ಎನ್ನಲಾಗಿದೆ. 2023ರಲ್ಲಿ ಎಇಇ ನೇಮಕಾತಿ ವೇಳೆ ನಡೆದ ಅಕ್ರಮ ತನಿಖೆಗೆ ಆಯೋಗ ಉಪ ಸಮಿತಿ ನೇಮಿಸಿತ್ತು. ಆದರೆ ಸದಸ್ಯರಿಗೆ ತಿಳಿಸದೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸಲು ಶಾಂತ ಹೊಸಮನಿ ಮುಂದಾಗಿದ್ದರು. ಅಂದಿನ ಕಾರ್ಯದರ್ಶಿ ಮೂಲಕ ಪ್ರಕಟಣೆ ಹೊರಡಿಸುವಂತೆ ಒತ್ತಡ ಕೂಡ ಹೇರಿದ್ದರು. ಇದಕ್ಕೆ ಕೆಲ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆಯ್ಕೆ ಪಟ್ಟಿ ಪ್ರಕಟವಾಗಿರಲಿಲ್ಲ. ಬಳಿಕ ಉಪ ಸಮಿತಿಯಿಂದ ಶಾಂತ ಹೊಸಮನಿ ಹೊರಗಿಡಲಾಗಿತ್ತು ಎಂಬುದು ತನಿಖೆ ವೇಳೆ ಬಯಲಾಗಿತ್ತು. ಈ ಎಲ್ಲದರ ಕುರಿತು ಶಾಂತಾ ಹೊಸಮನಿಗೆ ತನಿಖಾಧಿಕಾರಿಗಳು ಪ್ರಶ್ನೆ ಕೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net