

ಹುಳಿಯಾರು :
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆರೆ ಅಂಗಳದಲ್ಲಿ ಅತಿಕ್ರಮಣ ಹಾಗೂ ತ್ಯಾಜ್ಯ ವಿಲೇವಾರಿ ವಿಚಾರವಾಗಿ ಉಂಟಾಗಿರುವ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಲೋಕಾಯುಕ್ತರ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಇತ್ತೀಚೆಗೆ ತೆರವುಗೊಳಿಸಲಾಗಿದ್ದ ಗೂಡಂಗಡಿ, ಚಹಾ ಅಂಗಡಿಗಳು, ಗೋಬಿ, ಪಾನಿಪುರಿ ಹಾಗೂ ಎಗ್‌ರೈಸ್ ಸೆಂಟರ್‌ಗಳು ಹಬ್ಬದ ನೆಪದಲ್ಲಿ ಮತ್ತೆ ಕೆರೆ ಅಂಗಳದಲ್ಲಿ ತಲೆ ಎತ್ತಿವೆ.
ಇದರಿಂದ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ನಡುವೆ ವಾತಿನ ಚಕಮಕಿ ನಡೆದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಲೋಕಾಯುಕ್ತರ ನಿರ್ದೇಶನದ ಹಿನ್ನೆಲೆಯಲ್ಲಿ ಆ.17ರಂದು ಪಟ್ಟಣ ಪಂಚಾಯಿತಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕೆರೆ ಅಂಗಳದಲ್ಲಿದ್ದ ಗೂಡಂಗಡಿ, ಹೋಟೆಲ್, ಗೋಬಿ ಹಾಗೂ ಚಹಾ ಅಂಗಡಿಗಳನ್ನು ತೆರವುಗೊಳಿಸಿದ್ದರು.
ಆ.19ರಂದು ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ನಡೆದ ವಿಚಾರಣೆಗೆ ಹುಳಿಯಾರು ಪಪಂ ಮುಖ್ಯಾಧಿಕಾರಿ ಮಂಜುನಾಥ್ ಹಾಜರಾಗಿ, ಕೆರೆ ಅಂಗಳದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಿರುವುದಾಗಿ ವಾಹಿತಿ ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿ ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ವರದಿ ಸಲ್ಲಿಸಿದ ಬಳಿಕವಷ್ಟೇ ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ಉಪಲೋಕಾಯುಕ್ತರು ಸ್ಪಷ್ಟಪಡಿಸಿದ್ದರು. ಅಲ್ಲದೆ, ತೆರವುಗೊಳಿಸಿದ ಬಳಿಕ ಮತ್ತೆ ಕೆರೆ ಅಂಗಳದಲ್ಲಿ ಗೂಡಂಗಡಿಗಳು ಕಾಣಿಸಿಕೊಂಡರೆ ಜೈಲು ಶಿಕ್ಷೆ ಸೇರಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಎಚ್ಚರಿಕೆಯ ಬೆನ್ನಲ್ಲೇ ವರಮಹಾಲಕ್ಷ್ಮೀ ಹಾಗೂ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಆ.20ರಂದು ಕೆಲ ವ್ಯಾಪಾರಿಗಳು ಕೆರೆ ಅಂಗಳದಲ್ಲಿ ಮತ್ತೆ ಗೂಡಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಆರಂಭಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಸ್ಥಳಕ್ಕೆ ತೆರಳಿದ ಪಪಂ ಮುಖ್ಯಾಧಿಕಾರಿ ಮಂಜುನಾಥ್, ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚಿಸಿದ ಸಂದರ್ಭದಲ್ಲಿ ವ್ಯಾಪಾರಿಗಳು ಹಾಗೂ ಅಧಿಕಾರಿಗಳ ನಡುವೆ ವಾತಿನ ಚಕಮಕಿ ನಡೆದಿದೆ. ಬಳಿಕ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮುಖ್ಯಾಧಿಕಾರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಇತ್ತ, ಬೀದಿಬದಿ ವ್ಯಾಪಾರಿಗಳು ತಮ್ಮ ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಡಳಿತಕ್ಕೆ ಮನವಿ ವಾಡಿದ್ದಾರೆ. ಲೋಕಾಯುಕ್ತರ ಸ್ಪಷ್ಟ ನಿರ್ದೇಶನದ ನಡುವೆಯೇ ಕೆರೆ ಅಂಗಳದಲ್ಲಿ ಮತ್ತೆ ಅತಿಕ್ರಮಣಕ್ಕೆ ಅವಕಾಶವಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.