3ನೇ ವಾರ್ಡಿನ ಒಳಚರಂಡಿ ಸಮಸ್ಯೆಗೆ ಶೀಘ್ರವೇ ಮುಕ್ತಿ

ಪುರಸಭೆ ವ್ಯಾಪ್ತಿಯ 3ನೇ ವಾರ್ಡಿನ ಒಳ ಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲಿಸುತ್ತಿರುವುದು.
ಪುರಸಭೆ ವ್ಯಾಪ್ತಿಯ 3ನೇ ವಾರ್ಡಿನ ಒಳ ಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲಿಸುತ್ತಿರುವುದು.
Published on
ಬೇಲೂರು: ಪುರಸಭೆ ವ್ಯಾಪ್ತಿಯ 3ನೇ ವಾರ್ಡಿನಲ್ಲಿ ಸಾಕಷ್ಟು ವರ್ಷಗಳಿಂದ ಸಾರ್ವಜನಿಕರನ್ನು ಕಾಡುತ್ತಿದ್ದ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ನೇತೃತ್ವದಲ್ಲಿ, ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶೀಘ್ರದಲ್ಲೆ ಕಾಮಗಾರಿಗೆ ಚಾಲನೆ ನೀಡುವ ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿ, ಪುರಸಭೆಗೆ ಸೇರಿದ 3ನೇ ವಾರ್ಡಿನಲ್ಲಿ ಹಲವು ವರ್ಷಗಳಿಂದ ಒಳಚರಂಡಿ ಸಮಸ್ಯೆ ಸಾರ್ವಜನಿಕರನ್ನು ಕಾಡುತಿತ್ತು. ಆದರೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆಯಿಂದ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈ ಹಿಂದೆ ಟೆಂಡರ್ ಪ್ರಕ್ರಿಯೆ ನಡೆದಿದ್ದರೂ ಅದು ವಾಪಸ್ ಆಗಿತ್ತು. ನಂತರ ಇಂಜಿನಿಯರ್, ಮುಖ್ಯಾಧಿಕಾರಿಗಳ ಗಮನಕ್ಕೆ ವಿಷಯ ತರಲಾಗಿದ್ದರಿಂದ ಕಾಮಗಾರಿಗೆ ಸಂಬಂಧಿಸಿದ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆದರೆ ಈ ಪ್ರದೇಶವು ಹೋಲಿ ಕ್ರಾಸ್ ಆಸ್ಪತ್ರೆಗೆ ಸೇರಿದ ಜಾಗವಾಗಿರುವುದರಿಂದ ಒಳಚರಂಡಿ ನಿರ್ಮಾಣಕ್ಕೆ ಅನುಮತಿ ಅಗತ್ಯವಿತ್ತು. ಈ ಸಂಬಂಧ ಹಿರಿಯ ಪತ್ರಕರ್ತರಾದ ಜೇಮ್ಸ್ ಡಿಸೋಜಾ ಅವರ ಮೂಲಕ ಹೋಲಿ ಕ್ರಾಸ್ ಆಸ್ಪತ್ರೆಯ ಫಾದರ್ ರಾಯಪ್ಪ ಅವರೊಂದಿಗೆ ಚರ್ಚಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಸಹಕಾರ ನೀಡಲು ಅವರು ಸಮ್ಮತಿಸಿದ್ದರಿಂದ ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಇದರಿಂದ ಈ ಭಾಗದ ಸಾರ್ವಜನಿಕರ ಬಹು ದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ಥಳೀಯ ಮುಖಂಡ ಚಂದ್ರಶೆಟ್ಟಿ ಮಾತನಾಡಿ, ವಾರ್ಡಿನ ಸಮಸ್ಯೆ ಕುರಿತು ಹಲವು ಬಾರಿ ಮನವಿ ಮಾಡಲಾಗಿತ್ತು. ಮೊದಲ ಟೆಂಡರ್ ವಾಪಸ್ ಆದ ಬಳಿಕ ಮತ್ತೊಮ್ಮೆ ಅಧ್ಯಕ್ಷರು ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಇದೀಗ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಸಮಸ್ಯೆಗೆ ತಕ್ಷಣ ಸ್ಪಂದಿಸಿದ್ದಾರೆ. ಶೀಘ್ರವಾಗಿ ಕಾಮಗಾರಿ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, ಇಂಜಿನಿಯರ್ ಮೋಹನ್, ಹಿರಿಯ ಪತ್ರಕರ್ತ ಜೇಮ್ಸ್ ಡಿಸೋಜಾ, ಫಾದರ್ ರಾಯಪ್ಪ, ಆರೋಗ್ಯಾಧಿಕಾರಿ ಲೋಹಿತ್, ಸ್ಥಳೀಯರಾದ ತನ್ವೀರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net