ಕಮಲದಿಂದ ಸೇವಾ ಸಂಕಲ್ಪ ಅಭಿಯಾನ

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯ 25 ವರ್ಷಗಳ ಸಾರ್ವಜನಿಕ ಸೇವೆ ಮತ್ತು ಸಮರ್ಪಿತ ಆಡಳಿತವನ್ನು ಸ್ಮರಿಸುವ ಹಾಗೂ ವಿಕಸಿತ ಭಾರತ 2047ರ ಸಾಮೂಹಿಕ ದೃಷ್ಟಿಕೋನ ಸಲುವಾಗಿ ಬಿಜೆಪಿ ಸೆ.17 ರಿಂದ ಅಕ್ಟೋಬರ್ 17ರವರೆಗೆ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದೆ.
ಸೆ.17ರಂದು ಮೋದಿಯ 25 ವರ್ಷಗಳ ಸಾರ್ವಜನಿಕ ಸೇವೆಗೆ ಕೃತಜ್ಞತೆ ಸಲ್ಲಿಸಲು ಸರ್ಕಾರಿ ಕಲ್ಯಾಣ ಯೋಜನೆಗಳ ಲಾನುಭವಿಗಳ ಮನೆಗಳಿಗೆ ಕಾರ್ಯಕರ್ತರು ಭೇಟಿ ಕೊಟ್ಟು ಆರ್ಶೀವಾದದ ದೀಪ ಬೆಳಗಿಸಿ ಜಾಲತಾಣದಲ್ಲಿ ಹ್ಯಾಶ್‌ಟ್ಯಾಗ್‌ನೊಂದಿಗೆ ಪೋಟೋ ಹಂಚಿಕೊಳ್ಳಲಿದ್ದಾರೆ.
ಸೆಪ್ಟೆಂಬರ್ 18 ರಿಂದ 24ವರೆಗೆ ನಮೋ ಸೇವಾ ಕಥಾ ಹೆಸರಿನಲ್ಲಿ ಕೇಂದ್ರದ ಕಲ್ಯಾಣ ಸಾಧನೆಗಳನ್ನು ಬಿಂಬಿಸುವ 25-30 ನಿಮಿಷಗಳ ಸಂಗೀತಮಯ ಬೀದಿ ನಾಟಕಗಳ ಆಯೋಜನೆ. ಅ.2ರಂದು ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ಬೀದಿ ನಾಟಕವನ್ನು ಜಿಲ್ಲೆಯ ಪ್ರಮುಖ ಸಾರ್ವಜನಿಕ ಸ್ಥಳದಲ್ಲಿ ಮತ್ತು ಶಾಲೆ, ಕಾಲೇಜುಗಳಲ್ಲಿ ನಾಟಕ ಪ್ರದರ್ಶಿಸಲು ನಿರ್ಧಾರ ಮಾಡಿದೆ.
"

ಪ್ರಧಾನಿ ನರೇಂದ್ರ ಮೋದಿಯ 25 ವರ್ಷಗಳ ಸಾರ್ವಜನಿಕ ಸೇವೆ ಮತ್ತು ಸಮರ್ಪಿತ ಆಡಳಿತವನ್ನು ಸೆ.17ರಿಂದ 1 ತಿಂಗಳ ಕಾಲ ರಾಜ್ಯಾದ್ಯಂತ ವಿವಿಧ ಸೇವಾ ಚಟುವಟಿಕೆ ಮೂಲಕ ಸಂಭ್ರಮದಿಂದ ಆಚರಿಸಲು ಉದ್ದೇಶಿಸಲಾಗಿದೆ.

ಸೆ.25 ರಿಂದ ಅ.6ವರೆಗೆ ಅಂಗನವಾಡಿಯಲ್ಲಿ ಉತ್ಸವದಲ್ಲಿ ಸ್ಥಳೀಯ ಅಂಗನವಾಡಿ ಕೇಂದ್ರಗಳಿಂದ ಮಕ್ಕಳೊಂದಿಗೆ ಅವರ ಪಾಲಕರಿಗೂ ಆಹ್ವಾನ ನೀಡಬೇಕು. ಕೇಂದ್ರ ಸರ್ಕಾರದ ಪೌಷ್ಟಿಕತೆ, ಆರೋಗ್ಯ ಮತ್ತು ಮಹಿಳಾ ಕಲ್ಯಾಣ ಯೋಜನೆಗಳ ಕುರಿತು ಸರಳ ಭಾಷೆಯಲ್ಲಿ ಮಾಹಿತಿ ನೀಡುವುದು ಮತ್ತು ಮಕ್ಕಳಿಗಾಗಿ ಸಣ್ಣ ಮನರಂಜನಾ ಚಟುವಟಿಕೆಯನ್ನು ಆಯೋಜಿಸಲಾಗುತ್ತಿದೆ.
ಪ್ರಮುಖ ಸಾರ್ವಜನಿಕ ಸ್ಥಳದಲ್ಲಿ ಜನಕಲ್ಯಾಣ ಯೋಜನೆಗಳು, ರಾಷ್ಟ್ರೀಯ ಚಿಹ್ನೆಗಳು ಮತ್ತು ವಿಕಸಿತ ಭಾರತದ ಕನಸು ಪ್ರತಿಬಿಂದಿಸುವಂತೆ ರಂಗೋಲಿ ಸ್ಪರ್ಧೆ ಮತ್ತು ಡ್ರೋಣ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
ಅ.7ರಂದು ಸೇವಾ ಜ್ಯೋತಿ ಯಾತ್ರೆಯನ್ನು ಪ್ರತಿಯೊಂದು ಜಿಲ್ಲೆ ಮತ್ತು ಪ್ರತಿಯೊಂದು ಗ್ರಾಮದಲ್ಲಿ ನಡೆಯಬೇಕು. ಗ್ರಾಮ ಅಥವಾ ಜಿಲ್ಲೆಯ ವಿವಿಧ ದಿಕ್ಕುಗಳಿಂದ ಸಣ್ಣ ಸಣ್ಣ ಯಾತ್ರೆಗಳು ಆರಂಭವಾಗಿ ಕೊನೆಯಲ್ಲಿ ನಿಗದಿತ ಸ್ಥಳದಲ್ಲಿ ಒಂದಾಗ ಬೇಕು. ದೂರದಿಂದ ಬರುವವರು ಬೈಕ್ ರ‌್ಯಾಲಿ ಮೂಲಕ ತಲುಪಲು ಬಿಜೆಪಿ ಸಂಕಲ್ಪ ಮಾಡಿದೆ.
ಅ.7 ರಿಂದ 14ರ ವರೆಗೆ 25 ಕೋಟಿ ಮಕ್ಕಳ ಕನಸಿನ ಭಾರತ ಹೆಸರಿನಲ್ಲಿ ದೇಶದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಪ್ರಧಾನಿ ಮೋದಿಯ ವಿಕಸಿತ ಭಾರತದ ಸಂಕಲ್ಪದ ಕುರಿತು ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಬಿಜೆಪಿಯ ನಾಯಕರು ಮಾಹಿತಿ ನೀಡಿದ್ದಾರೆ.

ಡಿಜಿಟಲ್ ಕಥನ ಅಭಿಯಾನ

ಅ.15 ರಿಂದ 17ರ ವರೆಗೆ ಡಿಜಿಟಲ್ ಕಥನ ಅಭಿಯಾನ ಹಮ್ಮಿಕೊಂಡಿದ್ದು, ಕೇಂದ್ರ ಸರ್ಕಾರದ ಯೋಜನೆಗಳ ಲಾನುಭವಿಗಳಿಂದ ಅನುಭವ ಕಥನ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಪ್ರಮುಖ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳನ್ನು ರಾಜ್ಯದ 25 ಪ್ರಮುಖ ಪರಿವರ್ತನಾ ಸ್ಥಳಗಳಿಗೆ ಕರೆದೊಯ್ದು ಅಲ್ಲಿನ ಅಭಿವೃದ್ಧಿಯ ನೇರವಾಗಿ ದಾಖಲಿಸಲು ಮುಂದಾಗಿದೆ. ಇದಾದ ಮೇಲೆ ಅ.17ಕ್ಕೆ ಮಹಾ ಸಮಾರೋಪ ಆಯೋಜನೆ ಮಾಡಲಾಗುತ್ತಿದೆ ಎಂದು ಬಿಜೆಪಿಯ ನಾಯಕರು ತಿಳಿಸಿದರು.

ರಾಷ್ಟ್ರೀಯ ಇನ್ನೋವೇಷನ್ ಚಾಲೆಂಜ್ :

ದೇಶದ ಯುವಜನತೆ, ವಿದ್ಯಾರ್ಥಿಗಳು, ಸ್ಟಾರ್ಟ್‌ಅಪ್‌ಗಳು, ವೃತ್ತಿಪರರು, ಕಾರ್ಪೋರೇಟ್ ನಾವೀನ್ಯಕಾರರು ಮತ್ತು ತಳಮಟ್ಟದಲ್ಲಿ ನವೀನ ಪರಿಹಾರಗಳನ್ನು ರೂಪಿಸುತ್ತಿರುವ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಲು ಬೆಂಗಳೂರಿನಲ್ಲಿ ಪ್ರಾದೇಶಿಕ ರಾಷ್ಟ್ರೀಯ ಇನ್ನೋವೇಷನ್ ಚಾಲೆಂಜ್ ಏರ್ಪಡಿಸಲಾಗುತ್ತಿದೆ. ಇದರಲ್ಲಿ ಪ್ರಮುಖ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ವೇದಿಕೆಯಲ್ಲಿ ಉತ್ತಮ ಪ್ರತಿಭೆಗಳನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕರೆದುಕೊಂಡು ಹೋಗಲಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net