ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಚಿವ ರಾಮಚಂದ್ರ ಗೌಡ ನಿಧನ | Ramachandra Gowda
ಮಾಜಿ ಸಚಿವ ರಾಮಚಂದ್ರ ಗೌಡ
Published on:
Copied
Follow Us
ಬೆಂಗಳೂರು: ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಚಿವ ರಾಮಚಂದ್ರ ಗೌಡ(Ramachandra Gowda) ಅವರು ಇಂದು(ಜು. 14) ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವಯಸ್ಸಾಗಿತ್ತು.
ಇತ್ಚೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಒಂದು ತಿಂಗಳಿನಿಂದ ರಾಜಾಜಿನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟುವಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಾಥ್ ನೀಡಿದ್ದರು. ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದ ಅವರು, ಬೆಂಗಳೂರು ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಪರಿಷತ್ತಿಗೆ ಒಟ್ಟು 5 ಬಾರಿ ಆಯ್ಕೆಯಾಗಿದ್ದರು. ಬಿಎಸ್ವೈ ಅವರ ಮೊದಲ ಸರ್ಕಾರದಲ್ಲಿ ಸಚಿವರಾಗಿದ್ದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂತಾಪ
ರಾಮಚಂದ್ರ ಗೌಡ ಅವರ ನಿಧನಕ್ಕೆ ಎಕ್ಸ್ನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂತಾಪ ಸೂಚಿಸಿದ್ದು, ಭಾರತೀಯ ಜನತಾ ಪಕ್ಷದ ಹಿರಿಯ ಧುರೀಣರು, ಮಾಜಿ ಸಚಿವರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಾಮಚಂದ್ರ ಗೌಡ ಅವರ ಅಗಲಿಕೆಯ ಸುದ್ದಿ ತೀವ್ರ ಆಘಾತ ಮತ್ತು ನೋವುಂಟು ಮಾಡಿದೆ.
ಅತ್ಯಂತ ಸರಳ ಸಜ್ಜನಿಕೆಯ ಮೂರ್ತಿಯಾಗಿದ್ದ ಅವರು, ಅಪಾರ ಸಂಘಟನಾ ಕೌಶಲ್ಯ ಹಾಗೂ ಪಕ್ಷದ ಕಾರ್ಯಕರ್ತರ ಮೇಲಿನ ಅಪಾರ ಪ್ರೀತಿ, ಕಾಳಜಿಯಿಂದ ಎಲ್ಲರ ಮನಗೆದ್ದ ನಾಯಕರಾಗಿದ್ದರು. ಪಕ್ಷದ ಸಂಘಟನೆಗೆ ಮತ್ತು ಸಾರ್ವಜನಿಕ ಸೇವೆಗೆ ಅವರು ಸಲ್ಲಿಸಿದ ಕೊಡುಗೆ ಸದಾ ಸ್ಮರಣೀಯ.
ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಅಗಲಿಕೆಯ ತೀವ್ರ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ, ಬಂಧು-ಮಿತ್ರರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.