ಚಿಂತಾಮಣಿ: ನಗರದ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಯ ನಕಲಿ ಸಿಗರೇಟ್ ಮಾರಾಟ ಮಾಡುತ್ತಿದ್ದ ಅಂಗಡಿಯೊಂದರ ಮೇಲೆ ಕಂಪನಿ ಬ್ರ್ಯಾಂಡ್ ಪ್ರೊಟೆಕ್ಷನ್ ಅಧಿಕಾರಿಗಳು, ಸ್ಥಳಿಯ ಪೊಲೀಸರು ಜಂಟಿ ದಾಳಿ ನಡೆಸಿ ನಕಲಿ ಸಿಗರೇಟ್ ಪ್ಯಾಕೆಟ್ಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಕೆಲವು ದಿನಗಳಿಂದ ನಗರದ ಎಂಜಿ ರಸ್ತೆಯಲ್ಲಿ ಅಂಗಡಿಯಲ್ಲಿ ನಕಲಿ ಸಿಗರೇಟ್ ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಕಂಪನಿ ಬ್ರ್ಯಾಂಡ್ ಪ್ರೊಟೆಕ್ಷನ್ ವಿಭಾಗಕ್ಕೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆ ಕಾರ್ಯಾಚರಣೆಗಿಳಿದ ವ್ಯವಸ್ಥಾಪಕರು, ಪೊಲೀಸರ ನೆರವಿನೊಂದಿಗೆ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ.
ವಿವಿಧ ಮಾದರಿ ನಕಲಿ ಸಿಗರೇಟ್ ಬಾಕ್ಸ್ಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಅಸಲಿ ಪ್ಯಾಕೆಟ್ಗಳಂತೆಯೇ ಕಾಣುವ ನಕಲಿ ಉತ್ಪನ್ನಗಳು ಗ್ರಾಹಕರ ದಿಕ್ಕು ತಪ್ಪಿಸುತ್ತಿದ್ದವು. ನಕಲಿ ಸಿಗರೇಟ್ ಮಾರಾಟಕ್ಕೆ ಸಂಬಂಧಿಸಿದಂತೆ ಬ್ರ್ಯಾಂಡ್ ಪ್ರೊಟೆಕ್ಷನ್ ಮತ್ತು ನಕಲಿ ವಿರೋಧಿ ಸೇವಾ ಪೂರೈಕೆದಾರ ಅನ್ವೇಶ್ ಐಪಿಆರ್ ಸರ್ವೀಸಸ್ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಶ್ರೀನಿವಾಸ್ ಎಂಬುವವರು ನೀಡಿದ ದೂರಿನ ಮೇಲೆ ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.