ಮಾಟ-ಮಂತ್ರಕ್ಕೆ ಮರುಳಾಗೋ ಮುನ್ನ ಎಚ್ಚರ; ವಿಶೇಷ ಪೂಜೆ ಮಾಡಿಸಲು ಹೋಗಿ 7.5 ಲಕ್ಷ ರೂ.ಮೌಲ್ಯದ ಚಿನ್ನ ಕಳೆದುಕೊಂಡ ಟೆಕ್ಕಿ..Bengaluru

Bengaluru godwoman fraud
Bengaluru godwoman fraud
Published on

ಪ್ರಮುಖ ಮುಖ್ಯಾಂಶಗಳು

  • ಏಳು ಲಕ್ಷಕ್ಕೂ ಹೆಚ್ಚಿನ ಬೆಲೆಬಾಳುವ ಚಿನ್ನಾಭರಣ ಕಳೆದುಕೊಂಡ ಟೆಕ್ಕಿ
  • ಮಾಟ-ಮಂತ್ರದ ಹೆಸರಲ್ಲಿ ವಿಶೇಷ ಪೂಜೆ ಮಾಡಿಸುವ ನೆಪವೊಡ್ಡಿ ಚಿನ್ನಾಭರಣ ಉಡೀಸ್
  • ವೈಟ್​ಫೀಲ್ಡ್​ ಠಾಣೆಯಲ್ಲಿ ಪ್ರಕರಣ ದಾಖಲು, ಆರೋಪಿಗಳಿಗೆಗಾಗಿ ಹುಡುಕಾಟ
ಬೆಂಗಳೂರು: ದುಷ್ಟಶಕ್ತಿಗಳ ಪ್ರಭಾವವಿದೆ ಎಂದು ನಂಬಿಸಿ, ಜೀವಭಯ ಹುಟ್ಟಿಸಿ ಕುಟುಂಬವೊಂದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಯಂ ಘೋಷಿತ ದೇವಮಾನವ ಎಂದು ಹೇಳಿಕೊಂಡು ಟೆಕ್ಕಿ ಮೋಹಿನ್ ಪಾಷಾ ಎಂಬುವವರಿಗೆ ಸೇರಿದ 7.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದೊಯ್ದು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ಪರಿಚಯವಾಗಿದ್ದು ಹೇಗೆ?

ಸಂತ್ರಸ್ತ ಮೋಹಿನ್ ಪಾಷಾ (32) ಎಂಬುವವರಿಗೆ ಮೇ 23 ರಂದು ಅವರ ಸ್ನೇಹಿತ ಅಜ್ಜರ್ ಪಾಷಾ ಎಂಬುವವರು ಆಂಧ್ರಪ್ರದೇಶದ ಕುಪ್ಪಂ ಮೂಲದ ನವೀದಾ ಸುಲ್ತಾನಾ ಎಂಬಾಕೆಯನ್ನು ಪರಿಚಯಿಸಿದ್ದರು. ಹಳೇ ವಿಮಾನ ನಿಲ್ದಾಣ ರಸ್ತೆಯ  ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಸುಲ್ತಾನಾಳನ್ನು ಮೋಹಿನ್ ತಮ್ಮ ಮನೆಗೆ ಕರೆತಂದಿದ್ದರು.
ಮೋಹಿನ್​ ಮನೆಗೆ ಬಂದಿದ್ದ ನವೀದಾ ಸುಲ್ತಾನಾ ಕಿರಿಯ ಸಹೋದರನ ಮೇಲೆ ದುಷ್ಟ ಶಕ್ರತಿಯ ಪ್ರಭಾವವಿದೆ. ಇದರಿಂದ ಅವರ ಜೀವಕ್ಕೆ ಅಪಾಯ ಉಂಟಾಗಬಹುದು. ಇನ್ನು 10 ದಿನದೊಳಗೆ ವಿಶೇಷ ಪೂಜೆ-ವಿಧಿವಿಧಾನಗಳನ್ನು ಮಾಡದಿದ್ದರೆ ಆತ ಮರಣ ಹೊಂದುತ್ತಾನೆ ಎಂದು ಜೀವಭಯಹುಟ್ಟಿಸಿದ್ದರು. ಇದರಿಂದ ಆತಂಕಗೊಂಡ ಮೋಹಿನ್ ತಾಯಿ, ಆಕೆ ಹೇಳಿದ ಪೂಜಾ ಸಾಮಗ್ರಿಗಳನ್ನು ತರಲು ಹಾಗೂ ವಿಶೇಷ ಪೂಜೆ ನಡೆಸಲು ಒಪ್ಪಿಕೊಂಡಿದ್ದಾರೆ.

ಮಧ್ಯರಾತ್ರಿ ಪೂಜೆ, ಚಿನ್ನಗಳೆಲ್ಲ ಮಾಯ

ಮೇ 25 ರಂದು ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ನವೀದಾ ಸುಲ್ತಾನಾ ತನ್ನ ಸಹಚರರ ಜೊತೆಗೆ ಮನೆಗೆ ಬಂದು ಪೂಜೆಯ ವಿಧಿವಿಧಾನ ಆರಂಭಿಸಿದ್ದಾರೆ. ಪೂಜೆಯ ಭಾಗವಾಗಿ ಕುಟುಂಬಸ್ಥರು ತಮ್ಮಲ್ಲಿದ್ದ  35 ಗ್ರಾಂ ಚಿನ್ನದ ಆಭರಣಗಳು ಸೇರಿದಂತೆ  ಇತರ ಸಾಮಗ್ರಿಗಳನ್ನು ಯಾಗದಲ್ಲಿಟ್ಟರು. ಮುಜಾನೆ 4.30 ರವರೆಗೆ ಈ ಪೂಜೆ ನಡೆದಿದೆ.

ಚಿನ್ನವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟಿದ್ದ ವಂಚಕಿ

ಪೂಜೆ ಮುಗಿದ ನಂತರ, ಆರೋಪಿಗಳು ಆ ಪೂಜಾ ಸಾಮಗ್ರಿ ಮತ್ತು ಚಿನ್ನವನ್ನು ಬಟ್ಟೆಯ ಮೂಟೆಯಲ್ಲಿ ಕಟ್ಟಿ ಕಬ್ಬಿಣದ ಪೆಟ್ಟಿಗೆಯೊಂದರಲ್ಲಿ ಇಟ್ಟಿದ್ದಾರೆ. ಅಲ್ಲದೆ, ಈ ಪೂಜಾ ಕಾರ್ಯಗಳಿಗಾಗಿ ಮೋಹಿನ್ ಕುಟುಂಬಸ್ಥರು ಸುಮಾರು 30,000 ಹಣವನ್ನೂ ಖರ್ಚು ಮಾಡಿದ್ದಾರೆ. ಹೋಗುವ ಮುನ್ನ ಸುಲ್ತಾನಾ, ಮುಂದಿನ ಮೂರು ತಿಂಗಳವರೆಗೆ ಈ ಕಬ್ಬಿಣದ ಪೆಟ್ಟಿಗೆಯನ್ನು ತೆರೆಯಬಾರದು ಮತ್ತು ಮುಂದಿನ 10 ದಿನಗಳ ಕಾಲ ಯಾರೂ ಮನೆಯಿಂದ ಹೊರಗೆ ಹೋಗಬಾರದು ಎಂದು ಸೂಚನೆ ಕೊಟ್ಟಿದ್ದಳು. 
ಜೂನ್ 1 ರಂದು ಸುಲ್ತಾನಾ ಮತ್ತೆ ಮೋಹಿನ್‌ಗೆ ಕರೆ ಮಾಡಿ 60,000 ಸಾಲ ನೀಡುವಂತೆ ಕೇಳಿದ್ದಾಳೆ. ಆದರೆ ಮೋಹಿನ್ ಅಷ್ಟು ಹಣವನ್ನು ಹೊಂದಿಸಲು ಸಾಧ್ಯವಿಲ್ಲ ಎಂದಾಗ, ಆಕೆ ಫೋನ್‌ನಲ್ಲೇ ಮನಸೋಇಚ್ಛೆ ಬೈದು ನಿಂದಿಸಿದ್ದಾಳೆ. ಆಕೆಯ ವರ್ತನೆಯಿಂದ ಅನುಮಾನಗೊಂಡ ಮೋಹಿನ್, ತಕ್ಷಣವೇ ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯನ್ನು ತೆರೆದು ನೋಡಿದ್ದಾರೆ. ಆಗ ಪೆಟ್ಟಿಗೆಯಲ್ಲಿದ್ದ ಅಸಲಿ ಚಿನ್ನದ ಆಭರಣಗಳ ಬದಲಿಗೆ ತಾಮ್ರದ ಬೇರಿಂಗ್‌ಗಳನ್ನುಇಟ್ಟು ವಂಚಿಸಿರುವುದು ಬೆಳಕಿಗೆ ಬಂದಿದೆ.
ಇದರ ಬಗ್ಗೆ ಮೋಹಿನ್ ಆರೋಪಿಯನ್ನು ತರಾಟೆಗೆ ತೆಗೆದುಕೊಂಡಾಗ, ತಾನು ಮಾಟ-ಮಂತ್ರ ಮಾಡುವ ಜಾದೂಗಾರ್ತಿ ಎಂದು ಹೇಳಿಕೊಂಡ ಸುಲ್ತಾನಾ, ಒಡವೆಗಳನ್ನು ಮರಳಿ ನೀಡುವುದಾಗಿ ನಂಬಿಸಲು ಯತ್ನಿಸಿದ್ದಾಳೆ. ವೈಟ್​ಫೀಲ್ಡ್​ ಪೊಲೀಸರು ಸದ್ಯ ತನಿಖೆ ಕೈಗೊಂಡಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ತನಿಖೆ ನಡೆಸುತ್ತಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net