ಬೈಲುಕುಪ್ಪೆ: ಗ್ರಾಮೀಣ ಭಾಗದ ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡರೆ ಆರ್ಥಿಕವಾಗಿ ಕುಟುಂಬದ ಜವಾಬ್ದಾರಿಯನ್ನು ಸುಗಮವಾಗಿ ನಿರ್ವಹಿಸಬಹುದು ಎಂದು ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ರವಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊಸೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಸ್ವಯಂ ಉದ್ಯೋಗ ಪ್ರೇರಣಾ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಟುಂಬ ನಡೆಸಲು ಪುರುಷರೊಬ್ಬರನ್ನೇ ಅವಲಂಬಿಸಿಕೊಂಡು ಬದುಕಲು ಕಷ್ಟಕರವಾಗುತ್ತದೆ. ಆದ್ದರಿಂದ ಮಹಿಳೆಯರು ಸಹ ಬಟ್ಟೆ ಹೊಲಿಗೆ ತರಬೇತಿ, ಸೋಪ್ ತಯಾರಿಕೆ, ಗಂಧದಕಡ್ಡಿ ತಯಾರಿಕೆಯಂಥ ಕೌಶಲ ಕಲಿತರೆ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಅನುಕೂಲವಾಗಲಿದೆ ಎಂದರು.
ಕೊಡಗು ಜಿಲ್ಲೆ ಕೂಡಿಗೆ ರೋಡ್ ಸೆಟ್ ಸಂಸ್ಥೆ ಉಪನ್ಯಾಸಕಿ ನವ್ಯಾ ಮಾತನಾಡಿ, ಇಲ್ಲಿಗೆ ಸಮೀಪದಲ್ಲಿರುವ ನಮ್ಮ ಸಂಸ್ಥೆಯಲ್ಲಿ ಮಹಿಳೆಯರೇ ಆಗಲಿ ಅಥವಾ ಪುರುಷರಾಗಲಿ ಆಸಕ್ತಿಯಿರುವ ಯಾವುದೇ ತರಬೇತಿ ಹೊಂದಲು ಅವಕಾಶವಿದೆ. ಇಲ್ಲಿಗೆ ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಧರ್ಮಸ್ಥಳ ಸಂಸ್ಥೆಯ ಸೇವಾ ಪ್ರತಿನಿಧಿ ಲೀಲಾವತಿ, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಾದ ಪ್ರೇಮಾ, ಸೀಮಾ ಬಾನು, ಪುಟ್ಬಬಸಪ್ಪ, ಆಶಾ, ಸರಿತಾ, ಜೆವಿಕೆ ಇತರರು ಇದ್ದರು.