ತಳಿ ಸಂವರ್ಧನೆಗಾಗಿ ಬೆಂಗಳೂರು ಕೃಷಿ ವಿವಿಯಿಂದ ಗುಣಮಟ್ಟದ ಬೀಜೋತ್ಪಾದನೆ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಡೆಸುತ್ತಿರುವ ಬೀಜ ಸಂವರ್ಧನೆ ಕಾರ್ಯಕ್ರಮಗಳನ್ನು ಪರಿಚಯಿಸಲು ಬೀಜಗಳಿಂದಲೇ ಮಾಡಿರುವ ಮಾದರಿ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಡೆಸುತ್ತಿರುವ ಬೀಜ ಸಂವರ್ಧನೆ ಕಾರ್ಯಕ್ರಮಗಳನ್ನು ಪರಿಚಯಿಸಲು ಬೀಜಗಳಿಂದಲೇ ಮಾಡಿರುವ ಮಾದರಿ.
Published on
ಶ್ರವಣ್​ ನೀರಬಿದಿರೆ ಬೆಂಗಳೂರು
ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನ.13ರಿಂದ 16ರ ತನಕ ಆಯೋಜಿಸಿದ್ದ ಕೃಷಿಮೇಳದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಮಂದಿಗೆ ಕೃಷಿ ಮಾಹಿತಿ ಕಣಜಗಳಾಗಿ ಹಲವು ಮಳಿಗೆಗಳು ಕಾರ್ಯನಿರ್ವಹಿಸಿದವು. ಮೇಳ ಆಯೋಜಿಸಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಬಿತ್ತನೆ ಬೀಜ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಮಳಿಗೆ ಮೇಳದ ಮೂರು ದಿನವೂ ಸಾರ್ವಜನಿಕರನ್ನು ಆಕರ್ಷಿಸಿ, ಸುಧಾರಿತ ಬೀಜೋತ್ಪಾದನಾ ಕ್ರಮಗಳ ಪ್ರಚಾರದಲ್ಲಿ ತೊಡಗಿತ್ತು.
ವಿಶ್ವಬ್ಯಾಂಕ್​ ಮತ್ತು ಕೇಂದ್ರ ಸರ್ಕಾರದ ನೆರವಿನೊಂದಿಗೆ ಬೆಂಗಳೂರು ಕೃಷಿ ವಿವಿಯು ರಾಷ್ಟ್ರೀಯ ಬೀಜ ಯೋಜನೆಯನ್ನು ಆರಂಭಿಸಿದ್ದು, ಇದಕ್ಕೆ ಪೂರಕವಾಗಿ ಬೀಜ ಯೋಜನೆ, ತಳಿವರ್ಧಕ, ಗುಣಮಟ್ಟ ಬೀಜ ಯೋಜನೆ ಮತ್ತು ಬೀಜ ತಾಂತ್ರಿಕ ಸಂಶೋಧನಾ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ವಿವಿಯು ಕಳೆದ ಐದು ವರ್ಷಗಳಲ್ಲಿ 500ಕ್ಕೂ ಹೆಚ್ಚು ತಳಿವರ್ಧಕ ಬೀಜಗಳನ್ನು ಬಿಡುಗಡೆ ಮಾಡಿದ್ದು, "ಅಖಿಲ ಭಾರತ ಸುಸಂಟಿತ ಪ್ರಾಯೋಜನೆ& ಬೀಜ ಬೇಳೆಗಳ ಕಾರ್ಯಕ್ರಮ' ಮೂಲಕ ಗುಣಮಟ್ಟದ ಬೀಜೋತ್ಪಾದನೆಗೆ ಕೊಡುಗೆ ನೀಡುತ್ತಿದೆ. ತಳಿ ಸಂರಕ್ಷಣೆ ಮಾಡುತ್ತಿರುವ ಸ್ಥಳಿಯ ರೈತರನ್ನು ಗುರುತಿಸಿ ಅವರಿಗೆ ಸರ್ಕಾರಗಳಿಂದ ಸಹಾಯ ಒದಗಿಸುವ ಕೆಲಸವನ್ನೂ ವಿವಿ ಮಾಡುತ್ತಿದೆ.
ಸ್ಥಳೀಯ ಬೆಳೆಗಳ ಸಂವರ್ಧನೆ
ವಿವಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಬೆಳೆಯುವ ರಾಗಿ, ಅಲಸಂದೆ, ಭತ್ತ, ಸಿರಿಧಾನ್ಯಗಳು ಮತ್ತು ಇತರ ಬೀಜಬೇಳೆಗಳ ತಳಿ ಸಂವರ್ಧನೆ ಮಾಡಿ ಕೃಷಿ ಇಲಾಖೆಯ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ. ಸೂರ್ಯಕಾಂತಿ ಬೆಳೆಯ ಸುಧಾರಿತ ಬೀಜಗಳನ್ನೂ ಬಿಡುಗಡೆಗೊಳಿಸಿದ್ದು, ಹೆಚ್ಚಿನ ಬೇಡಿಕೆಯಿದೆ. ವಿವಿ ಉತ್ಪಾದಿಸಿರುವ ಗುಣಮಟ್ಟದ ಬೀಜಗಳನ್ನು ರೈತರು ನೇರವಾಗಿ ವಿವಿಯಿಂದ ಅಥವಾ ರೈತ ಸಂಪರ್ಕ ಕೇಂದ್ರದಿಂದ ಖರೀದಿಸಬಹುದು. ಆನ್​ಲೈನ್​ನಲ್ಲಿ ಖರೀದಿಸುವ ಆಯ್ಕೆಯನ್ನೂ ವಿಶ್ವವಿದ್ಯಾಲಯ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೇಡಿಕೆ ಆಧರಿಸಿ ಬೀಜೋತ್ಪಾದನಾ ಕಾರ್ಯಕ್ರಮಗಳನ್ನು ವಿವಿ ಮಾಡುತ್ತಿದೆ.

ವಿವಿಯ ಬೀಜೋತ್ಪಾದನಾ ಕಾರ್ಯಕ್ರಮಗಳನ್ನು ತಿಳಿಯುವ ಆಸಕ್ತಿಯಿಂದ ಸಾರ್ವಜನಿಕರು ಕೃಷಿ ಮೇಳದ ಮೂರು ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಬೇಟಿ ನೀಡಿದ್ದಾರೆ. ಉತ್ತಮ ಗುಣಮಟ್ಟದ ಬೀಜಗಳನ್ನು ಮೇಳದಲ್ಲಿ ಮಾರಟಕ್ಕಿಟ್ಟಿದ್ದರಿಂದ ಮುಗಿಬಿದ್ದು ಖರೀದಿಸಿದ್ದಾರೆ.

ರೈತರಿಂದ ಉತ್ತಮ ಪ್ರತಿಕ್ರಿಯೆ:
ವಿಶ್ವವಿದ್ಯಾಲಯದ ಕೃಷಿ ಕಾರ್ಯಕ್ರಮಗಳಿಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರೈತರಿಗೆ ಬೀಜ ವಿಜ್ಞಾನದ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದಿಂದ ಬೀಜ ಮೇಳ ಮತ್ತು ಬೀಜ ಕಾರ್ಯಾಗಾರಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಬಿತ್ತನೆಯಿಂದ ಹಿಡಿದು ಕೊಯ್ಲಿನ ತನಕ ಕೈಗೊಳ್ಳಬೇಕಾದ ಕ್ರಮಗಳ ತರಬೇತಿಯನ್ನು ರೈತರಿಗೆ ನೀಡಲಾಗುತ್ತದೆ.

ಹಲವು ವೈಶಿಷ್ಟ್ಯದ ಬೀಜೋತ್ಪಾದನೆ

ಕೃಷಿ ವಿಶ್ವವಿದ್ಯಾಲಯ ಉತ್ಪಾದಿಸುವ ಸುಧಾರಿತ ಬೀಜಗಳಿಗೆ ಜೂನ್​ನಿಂದ ಸೆಪ್ಟೆಂಬರ್​ತನಕ ರೈತರಿಂದ ಉತ್ತಮ ಬೇಡಿಕೆ ಬರುತ್ತಿವೆ. ಪ್ರತಿ ವರ್ಷ ವಿವಿಧ ತಳಿಗಳು ಬಿಡುಗಡೆಯಾಗುತ್ತಿದ್ದು, ಒಂದೇ ಬೆಳೆಯ ಹಲವು ಸುಧಾರಿತ ಬೀಜಗಳು ಲಭ್ಯವಿವೆ. ಹೆಚ್ಚು ರೋಗನಿರೋಧಕ ಗುಣವಿರುವ, ಉತ್ತಮ ಇಳುವರಿ ನೀಡುವ ವೈಶಿಷ್ಟ್ಯಗಳಿರುವ ಬೀಜಗಳನ್ನು ವಿವಿ ಬಿಡುಗಡೆಗೊಳಿಸಿದೆ.

ತೊಗರಿ, ಹೆಸರುಕಾಳು, ಉದ್ದು, ಕಡಲೆ, ಅವರೆ, ಹುರುಳಿ, ಅಕ್ಕಿ ಅವರೆ, ಸೋಯಾ ಅವರೆ, ಎಳ್ಳು ಮತ್ತು ಮೇವಿನ ಬೆಳೆಯಾದ ಮುಸುಕಿನ ಜೋಳಕ್ಕೆ ಅಧಿಕ ಬೇಡಿಕೆಯಿರುವ ಕಾರಣ ಅವುಗಳ ಸಂವರ್ಧಿತ ಬೀಜೋತ್ಪಾದನೆಗೆ ಆದ್ಯತೆ ನೀಡಲಾಗಿದೆ. ಹೂವು, ಹಣ್ಣು ಸೇರಿ ಇತರ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿತ ತಳಿವರ್ಧನೆಯನ್ನೂ ವಿವಿ ವತಿಯಿಂದ ಮಾಡಲಾಗುತ್ತಿದೆ. ರೈತರು ಕೂಡ ವಿವಿಯ ಬೀಜೋತ್ಪಾದನೆ ಕಾರ್ಯಕ್ರಮಗಳಿಗೆ ಕೈಜೋಡಿಸಿದ್ದು, ಅವರು ಬೆಳೆದ ಬೀಜವನ್ನು ವಿವಿ ಖರೀದಿ ಮಾಡಿ ಅದರ ಗುಣಮಟ್ಟ ಪರಿಶೀಲಿಸಿ, ಮುಂದೆ ಕೈಗೊಳ್ಳಬೇಕಿರುವ ಕ್ರಮಗಳನ್ನು ತಿಳಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net