ಟೌನ್​ಶಿಪ್​ ಯೋಜನೆ ಕೈಬಿಡದಿದ್ದರೆ ಸತ್ಯಾಗ್ರಹ: ಬಿಡದಿ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಎಂಟ್ರಿ! Bidadi Township Project

ಟೌನ್​ಶಿಪ್​ ಯೋಜನೆ ಕೈಬಿಡದಿದ್ದರೆ ಸತ್ಯಾಗ್ರಹ: ಬಿಡದಿ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಎಂಟ್ರಿ! Bidadi Township Project
ಟೌನ್​ಶಿಪ್​ ಯೋಜನೆ ಕೈಬಿಡದಿದ್ದರೆ ಸತ್ಯಾಗ್ರಹ: ಬಿಡದಿ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಎಂಟ್ರಿ! Bidadi Township Project
Published on

ಪ್ರಮುಖ ಮುಖ್ಯಾಂಶಗಳು

  • ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡದಿದ್ದರೆ ವಿಧಾನಸೌಧದ ಮುಂದೆ ಸತ್ಯಾಗ್ರಹ ಮಾಡುವುದಾಗಿ ಸಿಎಂಗೆ ದೇವೇಗೌಡರ ಖಡಕ್ ಎಚ್ಚರಿಕೆ
  • ಸಾವಿರಾರು ಎಕರೆ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದ ಹೆಚ್ ಡಿ ದೇವೇಗೌಡ
  • ಬಿಡದಿ ಯೋಜನೆಗಾಗಿ ಕಣ್ಣುಮುಚ್ಚಿ ಭೂಸ್ವಾಧೀನ ಮಾಡುತ್ತಿರುವ ಸರ್ಕಾರದ ವಿರುದ್ಧ ಉಗ್ರ ಹೋರಾಟದ ಮುನ್ನೆಚ್ಚರಿಕೆ ನೀಡಿದ ಮಾಜಿ ಪ್ರಧಾನಿ
  • ಬಿಡಿಎ ನಿವೇಶನಗಳೇ ಖಾಲಿ ಬಿದ್ದಿದ್ದರೂ ಸಾವಿರಾರು ಕೋಟಿ ವೆಚ್ಚದ ಬಿಡದಿ ಹೊಸ ಯೋಜನೆ ಬೇಕಿತ್ತೇ ಎಂದು ಪ್ರಶ್ನಿಸಿದ ದೇವೇಗೌಡ
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಗ್ರೇಟರ್ ಬೆಂಗಳೂರು ಬಿಡದಿ ಸಮಗ್ರ ಉಪನಗರ ಯೋಜನೆಗೆ ( Bidadi Township Project ) ಮಾಜಿ ಪ್ರಧಾನ ಮಂತ್ರಿ ಹಾಗೂ ಜ್ಯಾತ್ಯತೀತ ಜನತಾ ದಳ ( JDS ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್​.ಡಿ. ದೇವೇಗೌಡರು ( H D Deve Gowda ) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಡದಿ ಟೌನ್​ಶಿಫ್ ಯೋಜನೆಗಾಗಿ ರಾಮನಗರ ಮತ್ತು ಹಾರೋಹಳ್ಳಿ ತಾಲೂಕುಗಳ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿ ಎಚ್​.ಡಿ. ದೇವೇಗೌಡ ಅವರು ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಹಾಗೂ ಎಚ್ಚರಿಕೆಯ ಪತ್ರವೊಂದನ್ನು ಬರೆದಿದ್ದಾರೆ. ಒಂದು ವೇಳೆ ಸರ್ಕಾರ ಈ ಮನವಿಯನ್ನು ಪುರಸ್ಕರಿಸದಿದ್ದರೆ, ನೊಂದ ರೈತರ ಪರವಾಗಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಕುಳಿತು ಸತ್ಯಾಗ್ರಹ ನಡೆಸುವುದಾಗಿ 90 ವರ್ಷ ದಾಟಿದ ಹಿರಿಯ ನಾಯಕ ದೇವೇಗೌಡರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಬರೆದಿರುವ ಪತ್ರದ ಪ್ರಕಾರ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಡದಿ ಹೋಬಳಿಯ ಬೈರಮಂಗಲ, ಬನಗಿರಿ, ಹೊಸೂರು, ಕೆ.ಜಿ.ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಸೇರಿದಂತೆ ಒಟ್ಟು 9 ಗ್ರಾಮಗಳ 7,481 ಎಕರೆ 21.08 ಗುಂಟೆ ಜಮೀನನ್ನು ವಶಪಡಿಸಿಕೊಳ್ಳಲು ಉದ್ದೇಶಿಸಿದೆ. ಸುಮಾರು 18,133 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಈ ಉಪನಗರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಈಗಾಗಲೇ ಕಾಯ್ದೆ ಅಡಿಯಲ್ಲಿ ಪ್ರಾಥಮಿಕ ಅನುಮೋದನೆ ಕೂಡ ನೀಡಲಾಗಿದೆ. ಆದರೆ, ಈ ಭೂಸ್ವಾಧೀನದಿಂದಾಗಿ ಈ ಭಾಗದ ಒಟ್ಟು 10,580 ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಆಧಾರವನ್ನೇ ಕಳೆದುಕೊಂಡು ಬೀದಿಪಾಲಾಗಲಿದ್ದಾರೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಈ ಯೋಜನೆಯಿಂದ ಬಾಧಿತರಾಗುತ್ತಿರುವ ರೈತರ ಪೈಕಿ ಶೇ. 82 ರಷ್ಟು ಮಂದಿ ಕೇವಲ ಒಂದು ಎಕರೆಗಿಂತಲೂ ಕಡಿಮೆ ಜಮೀನು ಹೊಂದಿರುವ ಅತ್ಯಂತ ಬಡ ರೈತರಾಗಿದ್ದಾರೆ. ಈ ಭಾಗದ ಕೃಷಿಕರು ಕೇವಲ ಸಣ್ಣ-ಪುಟ್ಟ ನೀರಾವರಿ ನಂಬಿಕೊಂಡು ತೆಂಗು, ಅಡಿಕೆ, ಬಾಳೆ, ಮಾವು ಬೆಳೆಯುತ್ತಾ, ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಯನ್ನೇ ಉಪಕಸುಬಾಗಿಸಿಕೊಂಡಿದ್ದಾರೆ. ಈ ಗ್ರಾಮಗಳಿಂದ ಪ್ರತಿದಿನ ಸರಾಸರಿ 50 ಸಾವಿರ ಲೀಟರ್ ಹಾಲು ಉತ್ಪಾದನೆಯಾಗಿ ಬೆಂಗಳೂರು ಡೈರಿಗೆ ಸರಬರಾಜು ಆಗುತ್ತಿದ್ದು, ತಿಂಗಳಿಗೆ ಸರಿಸುಮಾರು 1 ಕೋಟಿ ರೂಪಾಯಿ ಆದಾಯವನ್ನು ಇಲ್ಲಿನ ಮಹಿಳೆಯರು ಗಳಿಸುತ್ತಿದ್ದಾರೆ. ಸರ್ಕಾರ ಭೂಮಿಯನ್ನು ಕಸಿದುಕೊಂಡರೆ ಇಡೀ ಹೈನು ಉದ್ಯಮ ನಾಶವಾಗಿ ಸಾವಿರಾರು ಕುಟುಂಬಗಳ ಯುವಕರು ನಿರುದ್ಯೋಗಿಗಳಾಗುತ್ತಾರೆ ಎಂದು ದೇವೇಗೌಡರು ಸರ್ಕಾರದ ಗಮನ ಸೆಳೆದಿದ್ದಾರೆ.
ಪತ್ರದಲ್ಲಿ ಸರ್ಕಾರದ ಇಂಟರ್ನಲ್ ಮ್ಯಾನೇಜ್‌ಮೆಂಟ್ ವೈಫಲ್ಯವನ್ನು ಪ್ರಶ್ನಿಸಿರುವ ದೇವೇಗೌಡರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈಗಾಗಲೇ ನಿರ್ಮಿಸಿರುವ ಡಾ. ಶಿವರಾಮ ಕಾರಂತ ಲೇಔಟ್ ಮತ್ತು ನಾಡಪ್ರಭು ಕೆಂಪೇಗೌಡ ಲೇಔಟ್‌ಗಳಲ್ಲಿ ಸಾವಿರಾರು ಸುಸಜ್ಜಿತ ನಿವೇಶನಗಳು ನಾಗರಿಕರಿಂದ ಬೇಡಿಕೆ ಇಲ್ಲದೆ ಖಾಲಿ ಬಿದ್ದಿವೆ ಎಂದು ನೆನಪಿಸಿದ್ದಾರೆ. ಇದರ ಜೊತೆಗೆ ಬೆಂಗಳೂರು ಬಿಜಿನೆಸ್ ಕಾರಿಡಾರ್ (PRR-2) ರಸ್ತೆಗೆ ಹೊಂದಿಕೊಂಡಂತೆ ಮತ್ತೊಂದು 6,217 ಎಕರೆ ಪ್ರದೇಶದಲ್ಲಿ ಹೊಸದಾಗಿ 6 ಬಡಾವಣೆಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. ಹೀಗಿರುವಾಗ, ಬಿಡಿಎನಲ್ಲಿ ಸಾವಿರಾರು ಸೈಟುಗಳು ಮಾರಾಟವಾಗದೇ ಉಳಿದಿದ್ದರೂ, ಮತ್ತೆ ಹೊಸದಾಗಿ 18 ಸಾವಿರ ಕೋಟಿಗೂ ಅಧಿಕ ವೆಚ್ಚದಲ್ಲಿ ಬಿಡದಿ ಉಪನಗರ ರಚಿಸಲು ಹೊರಟಿರುವುದು ಸರ್ಕಾರದ ದುಂದುವೆಚ್ಚ ಮತ್ತು ಅನಾಹುತಕಾರಿ ನಿರ್ಧಾರ ಎಂದು ಅವರು ಆಕ್ಷೇಪಿಸಿದ್ದಾರೆ.
ಕೇಂದ್ರ ಸರ್ಕಾರದ ಭೂಸ್ವಾಧೀನ ಕಾಯ್ದೆ 2013ರ ಪ್ರಕಾರ ಇಂತಹ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಕಡ್ಡಾಯವಾಗಿ ಮಾಡಬೇಕಾದ 'ಸಾಮಾಜಿಕ ಪರಿಣಾಮ ಸಮೀಕ್ಷೆ' (SIA) ಹಾಗೂ 'ಪರಿಸರ ಪರಿಣಾಮ ಸಮೀಕ್ಷೆ'ಗಳನ್ನು ರಾಜ್ಯ ಸರ್ಕಾರ ನಡೆಸಿಲ್ಲ. ಅಷ್ಟೇ ಅಲ್ಲದೆ, ಈ ಯೋಜನೆಗಾಗಿ ಸರಿಸುಮಾರು 2 ಲಕ್ಷ ಹಸಿರು ಮರಗಳನ್ನು ಕಡಿಯಬೇಕಾಗಲಿದ್ದು, ಇದರಿಂದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ಭಾರಿ ಧಕ್ಕೆಯಾಗಲಿದೆ. ಕೃಷಿಕರು ಸಲ್ಲಿಕೆ ಮಾಡಿದ್ದ 4,500 ಕ್ಕೂ ಹೆಚ್ಚು ತಕರಾರು ಅರ್ಜಿಗಳನ್ನು ಆಲಿಸದೆ, ಜನಾಭಿಪ್ರಾಯವನ್ನು ಸಂಪೂರ್ಣವಾಗಿ ತಿರಸ್ಕರಿಸಿ ಸರ್ಕಾರ ಏಕಪಕ್ಷೀಯವಾಗಿ ಅಂತಿಮ ಅಧಿಸೂಚನೆ ಹೊರಡಿಸಿರುವುದು ಜಂಟಿ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ ಎಂದು ಮಾಜಿ ಪ್ರಧಾನಿಗಳು ಪತ್ರದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಇತರೆ ಕಾರ್ಯಕ್ರಮಗಳಿಗಾಗಿ ಬರೋಬ್ಬರಿ 8.14 ಲಕ್ಷ ಕೋಟಿ ರೂಪಾಯಿಗಳ ಭಾರಿ ಮೊತ್ತದ ಸಾಲದ ಸುಳಿಗೆ ಸಿಲುಕಿದೆ. ಇಂತಹ ತೀವ್ರ ಆರ್ಥಿಕ ಸಂಕಷ್ಟದ ಸಮಯದಲ್ಲಿ ಬಿಡದಿ ಯೋಜನೆಗಾಗಿ ಮತ್ತೊಂದು 12,511 ಕೋಟಿ ರೂಪಾಯಿಗಳ ಸಾಲ ಮಾಡಲು ಬ್ಯಾಂಕುಗಳಿಂದ ಅನುಮತಿ ಪಡೆದಿರುವುದು ಆರ್ಥಿಕ ಶಿಸ್ತಿಗೆ ಧಕ್ಕೆ ತರಲಿದೆ. ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಚಿವ ಸಂಪುಟದ ಹಿರಿಯ ಸಚಿವರಾದ ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ ಮತ್ತು ಹೆಚ್.ಕೆ. ಪಾಟೀಲ್ ಅವರೇ ಬಹಿರಂಗವಾಗಿ ಆತಂಕ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿರುವ ದೇವೇಗೌಡರು, ಮುಖ್ಯಮಂತ್ರಿಗಳು ತಕ್ಷಣವೇ ಈ ರೈತ ವಿರೋಧಿ ಯೋಜನೆಯನ್ನು ಕೈಬಿಡಬೇಕು, ಇಲ್ಲದಿದ್ದರೆ ಜೆಡಿಎಸ್ ಪಕ್ಷದ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪತ್ರದ ಕೊನೆಯಲ್ಲಿ ಎಚ್ಚರಿಸಿದ್ದಾರೆ.

ಹೈಕಮಾಂ ಆಶ್ವಾಸನೆ ತುಂಬಿಸಲು ಬಿಡದಿ ಟೌನ್ ಶಿಪ್

ಬಿಡದಿ ಉಪನಗರ ಯೋಜನೆಗೆ ಸಂಬಂಧಿಸಿದಂತೆ ರಾಮನಗರದಲ್ಲಿ ರೈತರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಕ್ಕೆ ತೀವ್ರ ನೋವು ವ್ಯಕ್ತಪಡಿಸಿ ಸುದ್ದಿಗೋಷ್ಠಿ ನಡೆಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಲು ಮತ್ತು ಅದಕ್ಕೆ ಬೇಕಾದ ಹಣ ಹೊಂದಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಕೃಷಿ ಭೂಮಿ ವಶಪಡಿಸಿಕೊಳ್ಳಲು ಕೈ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈಗಾಗಲೇ ಈ ಯೋಜನೆ ವಿರೋಧಿಸಿ ಸಿಎಂಗೆ ಪತ್ರ ಬರೆದಿದ್ದರೂ ಯಾವುದೇ ಹಿಂಬರಹ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿರುವ ಅವರು, ರೈತರ ಮೇಲಿನ ಎಫ್‌ಐಆರ್ ಅನ್ನು ತಕ್ಷಣವೇ ವಾಪಸ್ ಪಡೆಯಬೇಕು ಹಾಗೂ ಯೋಜನೆಯನ್ನು ಕೈಬಿಡಬೇಕು, ಇಲ್ಲದಿದ್ದರೆ ವಿಧಾನಸೌಧದ ಎದುರು ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ. ಸದ್ಯ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಪ್ರವಾಸದಲ್ಲಿದ್ದರೂ ರೈತರ ಶಾಂತಿಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು, ಈ ಬಿಡದಿ ಹೋಬಳಿ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ್ ಸಹ ಬೆಂಬಲ ಸೂಚಿಸಿರುವುದಕ್ಕೆ ದೇವೇಗೌಡರು ಧನ್ಯವಾದ ಅರ್ಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net