ನಂಜನಗೂಡು: ತಾಲೂಕಿನ ಜನತೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಮಂಗಳವಾರ ನಗರದ ತಾಲೂಕು ಆಡಳಿತ ಭವನದಲ್ಲಿ ಕಿಕ್ಕಿರಿದು ತುಂಬಿದ್ದು, ಅಗತ್ಯ ದಾಖಲೆ ಪಡೆಯಲು ತೀವ್ರ ಪರದಾಟ ನಡೆಸಿದರು.
ಜಾತಿ ತಿದ್ದುಪಡಿ ಹಾಗೂ ಆದಾಯ ಪ್ರಮಾಣ ಪತ್ರ ಮಾಡಿಸಲು ಟೋಕನ್ ನೀಡುವುದಾಗಿ ಗೋಡೆಗಳ ಮೇಲೆ ಅಂಟಿಸಿದ ಪ್ರಕಟಣೆಯನ್ನು ಕಂಡು ಮಂಗಳವಾರ ಸುಮಾರು 500 ರಿಂದ 600 ಕ್ಕೂ ಹೆಚ್ಚು ಜನರು ಜಮಾವಣೆಗೊಂಡ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಗಂಟೆಗಟ್ಟಲೆ ಸಾಲಿನಲ್ಲಿ ನಿಂತ ಫಲಾನುಭವಿಗಳು ತಾಲೂಕು ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡುಬಂತು. ತಾಲೂಕು ಆಡಳಿತ ಒಂದೇ ಕೌಂಟರ್‌ನಲ್ಲಿ ಮಾತ್ರ ಅರ್ಜಿ ಸ್ವೀಕರಿಸುತ್ತಿತ್ತು. ಮುಂಜಾನೆಯಿಂದ ಸಂಜೆಯಾದರೂ ಗ್ರಾಮಾಂತರ ಪ್ರದೇಶಗಳಿಂದ ಬಂದ ವಯೋವೃದ್ಧರು, ವಿದ್ಯಾರ್ಥಿಗಳು, ದಿವ್ಯಾಂಗರು ಮುಂಜಾನೆಯಿಂದಲೇ ಕಾದು ಕಾದು ಬಸವಳಿದರು.
ಇತ್ತೀಚಿನ ದಿನಗಳಲ್ಲಿ ಒಳಮಿಸಲಾತಿ, ಗೃಹಲಕ್ಷ್ಮಿ, ವಿಧವಾ ವೇತನ, ವೃದ್ಧಾಪ್ಯ ವೇತನ, ದಿವ್ಯಾಂಗ ವೇತನ ಸೇರಿದಂತೆ ಇತರ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಫಲಾನುಭವಿಗಳು ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಆಯಾ ಇಲಾಖೆಗಳಿಗೆ ನೀಡಬೇಕಾದ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಮತ್ತು ನಾಡ ಕಚೇರಿಯಲ್ಲಿ ಸಾರ್ವಜನಿಕರು ಸದಾ ಗಿಜಿಗುಡುವ ದೃಶ್ಯ ಸಾಮಾನ್ಯವಾಗಿದೆ.
ಶಾಲಾ-ಕಾಲೇಜು ಪ್ರವೇಶಕ್ಕೆ ಪ್ರಮಾಣ ಪತ್ರ ಕಡ್ಡಾಯ. ಆದರೆ ತೆಗೆದುಕೊಳ್ಳಲು ವ್ಯವಸ್ಥೆಯೇ ಇಲ್ಲ. ಅಧಿಕಾರಿಗಳು ಜನರ ಸಂಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ಇನ್ನೂ ಕನಿಷ್ಠ 2 ಕೌಂಟರ್‌ಗಳನ್ನು ತೆರೆದು, ಆನ್‌ಲೈನ್ ವ್ಯವಸ್ಥೆ ಸರಳಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.