ರಾಯಲ್ಪಾಡು: ಊರಿಗೆ ದೇವಸ್ಥಾನ ಎಷ್ಟು ಮುಖ್ಯವೋ ಶಾಲೆಯೂ ಅಷ್ಟೇ ಮುಖ್ಯ ಎಂದು ಜ್ಞಾನಾಮೃತ ಟ್ರಸ್ಟ್ ಅಧ್ಯಕ್ಷ ಶ್ರೀಹರಿ ಹೇಳಿದರು.Schools
ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಉಚಿತವಾಗಿ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಾಗ್ರಿ ವಿತರಿಸಿ ಮಾತನಾಡಿ, ಮಕ್ಕಳ ಪಾಲನೆಯಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವೊ ಬೌದ್ಧಿಕ ಜ್ಞಾನ ವೃದ್ಧಿಸುವಲ್ಲಿ ಶಿಕ್ಷಕರ ಪಾತ್ರವೂ ಅಷ್ಟೇ ಮುಖ್ಯ. ಜಾತಿ, ಲಿಂಗ, ಧರ್ಮ, ಪ್ರಾಂತ್ಯ ಲೆಕ್ಕಿಸದೆ ಎಲ್ಲ ಮಕ್ಕಳನ್ನು ಸಮಾನ ರೀತಿಯಲ್ಲಿ ನೋಡಿ ಪಾಠ ಬೋಧಿಸುತ್ತಾರೆ ಎಂದರು.
ಪ್ರತಿಯೊಬ್ಬರಲ್ಲಿ ಒಂದು ಶಕ್ತಿ ಇರುತ್ತದೆ. ಅದನ್ನು ಹೊರಹೊಮ್ಮಿಸುವ ಕಾರ್ಯವಾಗಬೇಕು. ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳಿಸಿಕೊಳ್ಳಬೇಕು. ಇಲ್ಲಿ ಸೇರಿರುವ ಶಿಕ್ಷಕರು ಒಂದು ಗೆಳೆಯರ ಬಳಗ ಸೃಷ್ಟಿ ಮಾಡಿ ಬಡ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವಂತೆ ಸಲಹೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸಿಮೆಂಟ್ ನಾರಾಯಣಸ್ವಾಮಿ ಮಾತನಾಡಿ, ಸೌಲಭ್ಯ ವಂಚಿತ ಮಕ್ಕಳಿಗೆ ಖಾಸಗಿ ಶಾಲೆಗಳ ಮಕ್ಕಳನ್ನು ಕಂಡಾಗ ಕೀಳರಿಮೆ ಮೂಡುತ್ತದೆ. ಆದ್ದರಿಂದ ಸರ್ಕಾರದಿಂದ ಹಾಗೂ ದಾನಿಗಳ ಸಹಕಾರದೊಂದಿಗೆ ಎಲ್ಲ ಸೌಲಭ್ಯ ನೀಡಿದಾಗ ಬಡ ಮಕ್ಕಳು ಭವಿಷ್ಯ ಉತ್ತಮಗೊಳ್ಳುತ್ತದೆ ಎಂದರು.