ಶಾಲಾ ಸಂಸತ್ತಿನ ಚುನಾವಣೆ

ಇಂಡಿ ನಗರದ ದೇಸಾಯಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು
ಇಂಡಿ ನಗರದ ದೇಸಾಯಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು
Published on

ಪ್ರಮುಖ ಮುಖ್ಯಾಂಶಗಳು

  • ದೇಸಾಯಿ ಅಂತಾರಾಷ್ಟ್ರೀಯ ಶಾಲೆ
  • ಶಾಲಾ ಸಂಸತ್ತಿನ ಚುನಾವಣೆ
ಇಂಡಿ: ನಗರದ ದೇಸಾಯಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಗುರುವಾರ ಶಾಲಾ ಸಂಸತ್ತಿನ ಚುನಾವಣೆ ಅತ್ಯಂತ ಉತ್ಸಾಹ ಮತ್ತು ಶಿಸ್ತಿನಿಂದ ನಡೆಯಿತು.
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಚುನಾವಣೆಯಲ್ಲಿ ಶಾಲಾ ಕ್ಯಾಪ್ಟನ್, ವೈಸ್ ಕ್ಯಾಪ್ಟನ್, ಕಲ್ಚರಲ್ ಕ್ಯಾಪ್ಟನ್ ಸೇರಿ ವಿವಿಧ ಹುದ್ದೆಗಳಿಗೆ ಮತದಾನ ನಡೆಯಿತು. ಶಾಲೆಯ ಅಧ್ಯಕ್ಷ ಸಿದ್ದರಾಮಪ್ಪ ದೇಸಾಯಿ ಹಾಗೂ ಪ್ರಾಂಶುಪಾಲೆ ವಿದ್ಯುಲತಾ ಸುತಾರ್ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿಗಳು ಮತದಾರರ ಪಟ್ಟಿಯ ಆಧಾರದ ಮೇಲೆ ಸರದಿ ಸಾಲಿನಲ್ಲಿ ನಿಂತು ಮತದಾನದ ಹಕ್ಕನ್ನು ಚಲಾಯಿಸಿದರು. ಚುನಾವಣಾ ಆಯೋಗದ ಮಾದರಿಯಲ್ಲಿಯೇ ಮತಗಟ್ಟೆ, ಮತಪೆಟ್ಟಿಗೆ ಹಾಗೂ ಮತದಾನ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗಿದ್ದು, ಶಾಲಾ ಆವರಣವು ಪ್ರಜಾಪ್ರಭುತ್ವದ ಹಬ್ಬದ ವಾತಾವರಣವನ್ನು ಪಡೆದುಕೊಂಡಿತ್ತು.
ಅಭ್ಯರ್ಥಿಗಳು ತಮ್ಮ ಪ್ರಚಾರದ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದರೆ, ಮತದಾರರು ಜವಾಬ್ದಾರಿಯಿಂದ ತಮ್ಮ ನಾಯಕರನ್ನು ಆಯ್ಕೆ ಮಾಡಿದರು.
ಪ್ರಾಂಶುಪಾಲೆ ವಿದ್ಯುಲತಾ ಸುತಾರ್, ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವುದು ಅತ್ಯಂತ ಅಗತ್ಯವಾಗಿದ್ದು, ಇಂತಹ ಚುನಾವಣೆಗಳು ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರು ಹಾಗೂ ಸಿಬ್ಬಂದಿಯ ಸಹಕಾರದೊಂದಿಗೆ ಚುನಾವಣೆ ಯಶಸ್ವಿಯಾಗಿ ನೆರವೇರಿದ್ದು, ವಿದ್ಯಾರ್ಥಿಗಳ ಉತ್ಸಾಹ ಮತ್ತು ಶಿಸ್ತು ಚುನಾವಣೆಯ ಪ್ರಮುಖ ಆಕರ್ಷಣೆಯಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net