ಶಾಲಾರಂಭವನ್ನು ಮಕ್ಕಳ ಹಬ್ಬದಂತೆ ಆಚರಿಸಲು ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ

ಸಚಿವ ಮಧು ಬಂಗಾರಪ್ಪ ಸಭೆ
ಸಚಿವ ಮಧು ಬಂಗಾರಪ್ಪ ಸಭೆ
Published on

ಪ್ರಮುಖ ಮುಖ್ಯಾಂಶಗಳು

  • ಜೂ.1 ರಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ’ಕರ್ನಾಟಕ ಪಬ್ಲಿಕ್ ಶಾಲೆ’ಗಳ (ಕೆಪಿಎಸ್) ಕಟ್ಟಡಗಳಿಗೆ ಶಂಕುಸ್ಥಾಪನೆ
  • ಇಲಾಖೆಯ ಸಾಧನೆಗಳು ಮತ್ತು ಮುಂಬರುವ ಯೋಜನೆಗಳ ಕುರಿತು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ನಡೆದ ಆನ್‌ಲೈನ್ ಸಭೆಯಲ್ಲಿ ಸಮಗ್ರ ಮಾಹಿತಿ ಹಂಚಿಕೊಂಡರು.
  • ಮೇ 29, 30 ಮತ್ತು 31 ರಂದು ಶಾಲಾ ಆವರಣವನ್ನು ಸ್ವಚ್ಛಗೊಳಿಸಿ, ಜೂ.1 ರಂದು ಶಾಲೆಗೆ ಬರುವ ಮಕ್ಕಳನ್ನು ತಳಿರು ತೋರಣ ಕಟ್ಟಿ, ಹಬ್ಬದ ವಾತಾವರಣದಲ್ಲಿ (ಮಕ್ಕಳ ಹಬ್ಬ) ಸ್ವಾಗತಿಸಬೇಕು
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಗುಣಮಟ್ಟದ ಶಿಕ್ಷಣದ ಗುರಿಯೊಂದಿಗೆ ಜೂ.1 ರಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ’ಕರ್ನಾಟಕ ಪಬ್ಲಿಕ್ ಶಾಲೆ’ಗಳ (ಕೆಪಿಎಸ್) ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಪ್ರಾಂಶುಪಾಲರು, ಬಿಇಒ ಹಾಗೂ ಎಸ್‌ಡಿಎಂಸಿ ಸದಸ್ಯರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಇಲಾಖೆಯ ಸಾಧನೆಗಳು ಮತ್ತು ಮುಂಬರುವ ಯೋಜನೆಗಳ ಕುರಿತು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ನಡೆದ ಆನ್‌ಲೈನ್ ಸಭೆಯಲ್ಲಿ ಸಮಗ್ರ ಮಾಹಿತಿ ಹಂಚಿಕೊಂಡರು.

ಮಕ್ಕಳ ಹಬ್ಬ ಮತ್ತು ಅದ್ದೂರಿ ಸ್ವಾಗತ:

ಹೊಸ ಶೈಕ್ಷಣಿಕ ವರ್ಷದ ಆರಂಭವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಸಚಿವರು ಕರೆ ನೀಡಿದರು. ಮೇ 29, 30 ಮತ್ತು 31 ರಂದು ಶಾಲಾ ಆವರಣವನ್ನು ಸ್ವಚ್ಛಗೊಳಿಸಿ, ಜೂ.1 ರಂದು ಶಾಲೆಗೆ ಬರುವ ಮಕ್ಕಳನ್ನು ತಳಿರು ತೋರಣ ಕಟ್ಟಿ, ಹಬ್ಬದ ವಾತಾವರಣದಲ್ಲಿ (ಮಕ್ಕಳ ಹಬ್ಬ) ಸ್ವಾಗತಿಸಬೇಕು. ಮಕ್ಕಳಿಗಾಗಿ ವಿಶೇಷ ಊಟದ ವ್ಯವಸ್ಥೆ ಮಾಡುವ ಮೂಲಕ ಅವರಲ್ಲಿ ಶಾಲೆಗೆ ಬರುವ ಉತ್ಸಾಹವನ್ನು ಹೆಚ್ಚಿಸಬೇಕು. ಸರ್ಕಾರವು ರಾಜ್ಯಾದ್ಯಂತ ಒಂದು ಸಾವಿರ ಕೆಪಿಎಸ್ ಆರಂಭಿಸುವ ಗುರಿ ಹೊಂದಿದೆ ಎಂದು ಹೇಳಿದರು.

ಶಾಲೆ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿ:

ರಾಜ್ಯದಲ್ಲಿ 46 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿದ್ದು, ಹಳೆಯ ವಿದ್ಯಾರ್ಥಿಗಳು, ಉದ್ಯಮಿಗಳು ಹಾಗೂ ದಾನಿಗಳು ’ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆಯಡಿ ಆರ್ಥಿಕ ನೆರವು ನೀಡಬಹುದು. ಈ ಅನುದಾನವನ್ನು ಶಾಲೆಗಳಿಗೆ ಸ್ಮಾರ್ಟ್ ಟಿವಿ, ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ನಿರ್ಮಾಣ, ಫ್ಯಾನ್ ಮತ್ತು ಲ್ಯಾಬ್ ಉಪಕರಣಗಳನ್ನು ಒದಗಿಸಲು ಬಳಸಿಕೊಳ್ಳಲಾಗುತ್ತಿದೆ ಎಂದರು.

ದಾಖಲಾತಿ ಹೆಚ್ಚಿಸಲು ಒತ್ತು:

ಖಾಸಗಿ ಶಾಲೆಗಳಿಗಿಂತ ಅತ್ಯುತ್ತಮ ಹಾಗೂ ನುರಿತ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದಾರೆ ಎಂಬುದನ್ನು ಪಾಲಕರಿಗೆ ಮನವರಿಕೆ ಮಾಡಿಕೊಡುವ ಮೂಲಕ ದಾಖಲಾತಿ ಹೆಚ್ಚಿಸಬೇಕು. ಪ್ರತಿದಿನ ಮೊಟ್ಟೆ/ಬಾಳೆಹಣ್ಣು ಕೂಡ ವಿತರಿಸಲಾಗುತ್ತಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net