ವಿದ್ವತ್ತಿನ ಮೇರು; ವಿದ್ವಾಂಸ ಡಾ.ಎಸ್.ಆರ್. ರಾಮಸ್ವಾಮಿ ನಿಧನ

ಡಾ. ಎಸ್.ಆರ್. ರಾಮಸ್ವಾಮಿ
ಡಾ. ಎಸ್.ಆರ್. ರಾಮಸ್ವಾಮಿ
Published on
ಸೊಂಡೆಕೊಪ್ಪ ರಾಮಚಂದ್ರಶಾಸ್ತ್ರಿ ರಾಮಸ್ವಾಮಿ ಅವರು 1937ರ ಅಕ್ಟೋಬರ್ 29ರಂದು ಬೆಂಗಳೂರಿನಲ್ಲಿ ಜನಿಸಿದರು. ಇತಿಹಾಸಕಾರ ಮತ್ತು ಬಹುಭಾಷಾ ವಿದ್ವಾಂಸ ಡಾ.ಎಸ್. ಶ್ರೀಕಂಠ ಶಾಸ್ತ್ರಿ ಅವರ ಸೋದರಳಿಯ ಎಸ್.ಆರ್.ರಾಮಸ್ವಾಮಿ. ಇವರ ಕುಟುಂಬ ಪರಂಪರೆಯಲ್ಲಿ ಅನೇಕ ಪಂಡಿತರು, ಕವಿಗಳಿದ್ದಾರೆ. ಆರು ದಶಕಗಳ ಕಾಲ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರಾಮಸ್ವಾಮಿ ಅವರು, ಆರಂಭದಲ್ಲಿ ಸುಧಾ ವಾರಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದರು. ನಂತರ ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು 50ಕ್ಕೂ ಅಧಿಕ ವಿದ್ವತ್ ಪೂರ್ಣ ಗ್ರಂಥಗಳು, ಸಾವಿರಕ್ಕೂ ಅಧಿಕ ಲೇಖನಗಳನ್ನು ಬರೆದಿದ್ದಾರೆ. ಉತ್ಥಾನ ಮಾಸಪತ್ರಿಕೆ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕರಾಗಿ ದೀರ್ಘಾವಧಿ ಕಾರ್ಯನಿರ್ವಹಿಸಿದರು. ಡಿ.ವಿ. ಗುಂಡಪ್ಪ (ಡಿವಿಜಿ) ಅವರ ಆಪ್ತರಾಗಿದ್ದ ರಾಮಸ್ವಾಮಿ ಅವರು, ಡಿ.ವಿ.ಜಿ. ಅವರ ಆಯ್ದ ಬರಹಗಳ 11 ಸಂಪುಟಗಳ ಸಂಕಲನ ಕಾರ್ಯದಲ್ಲಿ ಪ್ರಮುಖ ಸಂಪಾಕರಾಗಿ ಕಾರ್ಯ ನಿರ್ವಹಿಸಿದರು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರಗೋಷ್ಠಿಗಳಲ್ಲಿ ಜನಪರ ಆರ್ಥಿಕ ಸಾಮಾಜಿಕ ನಿಲುವನ್ನೂ, ಪರಿಸರ ಸ್ವಾಸ್ಥ್ಯ ಪೋಷಕ ಚಿಂತನೆಯನ್ನೂ ಪ್ರತಿಪಾದಿಸಿ, ಪರಿಸರ ಆಂದೋಲನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸರ್ಕಾರದ ಅರಣ್ಯ ನೀತಿಯ ವಿರುದ್ಧ, 30 ಸಾವಿರ ಹೆಕ್ಟೇರ್ ಮೀಸಲು ಅರಣ್ಯ ರಕ್ಷಣೆಗಾಗಿ ಸಾಹಿತಿ ಕೋಟ ಶಿವರಾಮ ಕಾರಂತರ ಜೊತೆ ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೋರಾಟ ನಡೆಸಿದ್ದರು. ‘ಸಮಾಜ ಪರಿವರ್ತನ ಸಮುದಾಯ’ ಎಂಬ ಸ್ವಯಂಸೇವಾ ಸಂಘಟನೆಯನ್ನು ಕಟ್ಟಿ ಗ್ರಾಮೀಣ ಅಭಿವೃದ್ಧಿ, ಬುಡಕಟ್ಟು ಜನರ ಉನ್ನತಿ ಮತ್ತು ನಾಗರಿಕ ಹಕ್ಕುಗಳ ಸಬಲೀಕರಣಕ್ಕಾಗಿ ಶ್ರಮಿಸಿದರು.

ಸಾಹಿತ್ಯಕ್ಷೇತ್ರಕ್ಕೆ ಅನನ್ಯ ಕೊಡುಗೆ

ಹಿರಿಯ ವಿದ್ವಾಂಸ ರಾಮಸ್ವಾಮಿ ಅವರು 55 ಕೃತಿಗಳನ್ನು ರಚಿಸಿದ್ದಾರೆ. ಡಿ.ವಿ. ಗುಂಡಪ್ಪ, ವಿ. ಸೀತಾರಾಮಯ್ಯ, ರಾಳ್ಳಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ, ಸೀತಾರಾಮಶಾಸ್ತ್ರಿ ಮೊದಲಾದ ಧೀಮಂತರ ಕುರಿತು ಬರೆದ ‘ದೀವಟಿಗೆಗಳು’ (1998) ಕೃತಿ ಅನುಪಮ ವ್ಯಕ್ತಿ ಚಿತ್ರಮಾಲೆ ಆಗಿದೆ. ತೀ.ತಾ.ಶರ್ಮ ಹಾಗೂ ಎಂ.ಎಚ್. ಮರಿಗೌಡ ಮೊದಲಾದ ಆರು ಸಾಧಕರ ಕುರಿತು ‘ದೀಪ್ತಮಂತರು’ (2012)ಎಂಬ ವ್ಯಕ್ತಿಚಿತ್ರ ಸಂಕಲನ ರಚಿಸಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು

ಸಾಹಿತ್ಯ, ಪತ್ರಿಕೋದ್ಯಮ, ಸಮಾಜಮುಖಿ ಕಾರ್ಯಗಳಿಗಾಗಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾದರು. ಪತ್ರಿಕೋದ್ಯಮ ಸೇವೆಗಾಗಿ 2006ರಲ್ಲಿ ಆರ್ಯಭಟ ಪ್ರಶಸ್ತಿ, 2011ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ವರ್ಷದ ವ್ಯಕ್ತಿ ಪ್ರಶಸ್ತಿ, ಸಾಹಿತ್ಯ ಸೇವೆಗಾಗಿ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಿಥಿಕ್ ಸೊಸೈಟಿಯಿಂದ 2009ರಲ್ಲಿ ಶತಮಾನೋತ್ಸವ ಪ್ರಶಸ್ತಿ, ಸುದೀರ್ಘ ಸಾಹಿತ್ಯ ಸೇವೆಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 2015ರಲ್ಲಿ ‘ನಾಡೋಜ’ ಪ್ರಶಸ್ತಿ, 2022ರಲ್ಲಿ ಪಂಪ ಪ್ರಶಸ್ತಿ, ‘ಅ.ನ.ಕೃ. ಪ್ರಶಸ್ತಿ’ 2024ರಲ್ಲಿ ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಪುರಸ್ಕಾರಗಳು ರಾಮಸ್ವಾಮಿ ಅವರನ್ನು ಅರಸಿಕೊಂಡು ಬಂದವು

ಜೀವನ ಚರಿತ್ರೆ

‘ಕೋಲ್ಮಿಂಚು’ (1996) ಸುಭಾಷಚಂದ್ರ ಬೋಸ್ ಅವರ ಸಮಗ್ರ ಜೀವನಚರಿತ್ರೆ, ಜಯಪ್ರಕಾಶ್ ನಾರಾಯಣ್ (2000), ವಲ್ಲಭಭಾಯಿ ಪಟೇಲ್ (2000), ಮೋಕ್ಷಗುಂಡಂ ವಿಶ್ವೇಶ್ವರಯ್ಯ (2000) ಸೇರಿ 12 ಧೀಮಂತ ವ್ಯಕ್ತಿಗಳ ಜೀವನ ಚರಿತ್ರೆ ರಚಿಸಿದ್ದಾರೆ. ಭಾರತದಲ್ಲಿ ಸಮಾಜಕಾರ್ಯ, ಸ್ವಾತಂತ್ರೊ್ಯೕದಯದ ಮೈಲಿಗಲ್ಲುಗಳು, ಆರ್ಥಿಕತೆಯ ಎರಡು ಧ್ರುವ, ಶತಮಾನದ ತಿರುವಿನಲ್ಲಿ ಭಾರತ, ಕೆಲವು ಇತಿಹಾಸ-ಪರ್ವಗಳು ಸೇರಿ ಹಲವು ಪ್ರಬಂಧಗಳನ್ನು ರಚಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇವರ ಸಾವಿರಕ್ಕೂ ಅಧಿಕ ಅಧ್ಯಯನಪೂರ್ಣ ಲೇಖನಗಳು ಪ್ರಕಟಗೊಂಡಿವೆ.

ವಿದ್ವಾಂಸ ಡಾ.ಎಸ್.ಆರ್. ರಾಮಸ್ವಾಮಿ ನಿಧನ

ಬೆಂಗಳೂರು: ಹಿರಿಯ ವಿದ್ವಾಂಸ ಹಾಗೂ ಸಾಹಿತಿ ಡಾ. ಎಸ್.ಆರ್. ರಾಮಸ್ವಾಮಿ (88) ಅವರು ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಶಂಕರಪುರದ ರಂಗರಾವ್ ರಸ್ತೆಯಲ್ಲಿನ ಸ್ವಗೃಹದಲ್ಲಿ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು. ಮೃತರ ಅಂತಿಮ ದರ್ಶನಕ್ಕೆ ಬೆಳಗ್ಗೆ 10.30ರಿಂದ 12 ಗಂಟೆಯವರೆಗೆ ಕೆಂಪೇಗೌಡನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ತಿನ ಕೇಂದ್ರ ಕಚೇರಿ ಕೇಶವಶಿಲ್ಪದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬಳಿಕ, ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದಕ್ಕೂ ಮುನ್ನ ಶಾಸಕರಾದ ಸಿ.ಟಿ. ರವಿ, ರವಿಸುಬ್ರಹ್ಮಣ್ಯ, ಆರ್​ಎಸ್​ಎಸ್​ನ ಸಹ ಸರಕಾರ್ಯವಾಹ ಸಿ.ಆರ್. ಮುಕುಂದ, ಅಖಿಲ ಭಾರತ ಸಹ ಬೌದ್ಧಿಕ ಪ್ರಮುಖ ಸುಧೀರ್, ಮಿಥಿಕ್ ಸೊಸೈಟಿ ಅಧ್ಯಕ್ಷ ವಿ.ನಾಗರಾಜ್, ರಾಷ್ಟ್ರೆೊತ್ಥಾನ ಪರಿಷತ್ತು ಅಧ್ಯಕ್ಷ ಎಂ.ಪಿ. ಕುಮಾರ್, ಸಾಹಿತಿ ಬಾಬು ಕೃಷ್ಣಮೂರ್ತಿ, ಹಿರಿಯ ಪತ್ರಕರ್ತರಾದ ರಾಜಶೈಲೇಶ್ ಚಂದ್ರ ಗುಪ್ತ, ದು.ಗು.ಲಕ್ಷ್ಮಣ್, ಕಸಾಪ ಮಾಜಿ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮೊದಲಾದವರು ರಾಷ್ಟ್ರೆೊತ್ಥಾನಕ್ಕೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದುಕೊಂಡರು. ಅಂತ್ಯಕ್ರಿಯೆ ಸಂದರ್ಭದಲ್ಲಿ ಶತಾವಧಾನಿ ಡಾ.ಆರ್. ಗಣೇಶ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net