ಗೋಕಟ್ಟೆ ಉಳಿಸಿ ಜಾನುವಾರುಗಳಿಗೆ ನೀರು ಕೊಡಿ

Save the cowshed and give water to the cattle.
Save the cowshed and give water to the cattle.
Published on
ಗುಬ್ಬಿ: ಗೋಕಟ್ಟೆ ಒತ್ತುವರಿ ಮಾಡಿ ಮಣ್ಣು ಸುರಿದು ರಸ್ತೆ ನಿರ್ಮಿಸಿಕೊಂಡಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಾಲೂಕಿನ ಬಿದರೆ ಗ್ರಾಮಸ್ಥರು ಪಟ್ಟಣದ ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನೂರಾರು ವರ್ಷಗಳಿಂದ ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸಿದ್ದ ಗೋಕಟ್ಟೆಯನ್ನು ಏಕಾಏಕಿ ಮುಚ್ಚಿ ರಸ್ತೆ ನಿಮಾರ್ಣ ಮಾಡಿರುವ ಬಗ್ಗೆ ಹಾಗೂ ಮಣ್ಣು ತೆರವು ಮಾಡಲು ಗ್ರಾಪಂ, ತಾಪಂ ಹಾಗೂ ತಹಸೀಲ್ದಾರ್​ ಕಚೇರಿಗೆ ಮನವಿ ಮಾಡಿದ್ದೆವು. ಆದರೆ, ಯಾವ ಅಧಿಕಾರಿಗಳು ಮಣ್ಣು ತೆರವು ಮಾಡಲು ಮುಂದಾಗಲಿಲ್ಲ. ಈ ನಿಟ್ಟಿನಲ್ಲಿ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಗೋಕಟ್ಟೆ ಉಳಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್​.ವೆಂಕಟೇಗೌಡ ಮಾತನಾಡಿ, ಸುಮಾರು ಆರುನೂರು ವರ್ಷದ ಗಂಗಸಕಟ್ಟೆ ಜಾನುವಾರುಗಳಿಗೆ ನೀರು ಒದಗಿಸಿತ್ತು. ಅಂತಹ ಕಟ್ಟೆಗೆ ಮಣ್ಣು ಸುರಿದು ರಾತ್ರೋರಾತ್ರಿ ರಸ್ತೆ ನಿರ್ಮಿಸಿ ಕೆಲವರಿಗೆ ಮಾತ್ರ ಅನುವು ಮಾಡಲು ಸಾರ್ವಜನಿಕ ಅಸ್ತಿಯನ್ನೇ ಕಬಳಿಸಿದ್ದು ಸರಿಯಲ್ಲ. ಕಟ್ಟೆ ಕಬಳಿಕೆ ಆಗದಂತೆ ಎಚ್ಚರಿಕೆ ವಹಿಸಬೇಕಿದ್ದ ಅಧಿಕಾರಿಗಳು ಬೇಲಿಯೇ ಎದ್ದು ಹೊಲ ಮೇಯ್ದಂತೆ ಒತ್ತುವರಿಗೆ ಸಹಕಾರ ನೀಡಿದ್ದು ಸರಿಯಲ್ಲ. ಹಾಗಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸೈನಿಕರ ಸಂಘದ ಮಾಜಿ ಅಧ್ಯಕ್ಷ ಬಿದರೆ ಲೋಕೇಶ್​ ಮಾತನಾಡಿ, ಬೆರಳೆಣಿಕೆ ಮಂದಿಯ ಕುಮ್ಮಕ್ಕಿನಿಂದ ಪಿಡಿಒ ಸ್ಥಳಿಯವಾಗಿ ಜನ ವಿರೋಧಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪಿಡಿಒ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ತಾಪಂ ಇಒ ರಂಗನಾಥ್​ ಆಗಮಿಸಿ ಪ್ರತಿಭಟನಾಕಾರರ ಜತೆ ಚರ್ಚಿಸಿ ಒತ್ತುವರಿ ತೆರವಿಗೆ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು. ಪ್ರತಿಭಟನಾಕಾರರು ಜಿಲ್ಲಾಧಿಕಾರಿ,ಸಂಸದರು ಹಾಗೂ ಶಾಸಕರಿಗೆ ತಾಲೂಕು ಆಡಳಿತದ ಮೂಲಕ ಮನವಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net