ಗೋಲ್ಡನ್ ಅವರ್‌ನಲ್ಲಿ ರೋಗಿ ಪ್ರಾಣ ಉಳಿಸಿ

ಬೆಳಗಾವಿಯ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಈಚೆಗೆ ಆಯೋಜಿಸಿದ್ದ ವಿಶ್ವ ಎಮರ್ಜೆನ್ಸಿ ಮೆಡಿಸಿನ್ ದಿನಾಚರಣೆಯನ್ನು ಕರ್ನಲ್ ಡಾ.ಎಂ.ದಯಾನಂದ ಉದ್ಘಾಟಿಸಿದರು. ವಿ.ಡಿ.ಪಾಟೀಲ, ಡಾ.ಮಾಧವ ಪ್ರಭು, ಡಾ.ಎಂ.ವಿ.ಜಾಲಿ, ಡಾ.ಶಿವಾನಂದ ಬುಬನಾಳೆ ಇತರರಿದ್ದರು.
ಬೆಳಗಾವಿಯ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಈಚೆಗೆ ಆಯೋಜಿಸಿದ್ದ ವಿಶ್ವ ಎಮರ್ಜೆನ್ಸಿ ಮೆಡಿಸಿನ್ ದಿನಾಚರಣೆಯನ್ನು ಕರ್ನಲ್ ಡಾ.ಎಂ.ದಯಾನಂದ ಉದ್ಘಾಟಿಸಿದರು. ವಿ.ಡಿ.ಪಾಟೀಲ, ಡಾ.ಮಾಧವ ಪ್ರಭು, ಡಾ.ಎಂ.ವಿ.ಜಾಲಿ, ಡಾ.ಶಿವಾನಂದ ಬುಬನಾಳೆ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಅಪಘಾತ ಹಾಗೂ ತುರ್ತು ವೈದ್ಯಕೀಯ ಪರಿಸ್ಥಿತಿಯಲ್ಲಿ ಅಗತ್ಯವಿರುವ ಚಿಕಿತ್ಸೆ ನೀಡುತ್ತ ತಡಮಾಡದೇ ಸಕಲ ಸೌಲಭ್ಯಗಳಿರುವ ಆಸ್ಪತ್ರೆಗೆ ಸಾಗಿಸಬೇಕು. ಗೋಲ್ಡನ್ ಅವರ್ ಅವಧಿಯನ್ನು ಸರಿಯಾಗಿ ಉಪಯೋಗಿಸಿ ರೋಗಿಯ ಪ್ರಾಣ ಉಳಿಸಲು ಸಹಕರಿಸಬೇಕು ಎಂದು ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ ಹೇಳಿದರು.
ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದ ಎಮರ್ಜೆನ್ಸಿ ಮೆಡಿಸಿನ್ ವಿಭಾಗ ಈಚೆಗೆ ಏರ್ಪಡಿಸಿದ್ದ ವಿಶ್ವ ಎಮರ್ಜೆನ್ಸಿ ಮೆಡಿಸಿನ್ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ನಗರದಲ್ಲೂ ತುರ್ತು ವೈದ್ಯಕೀಯ ಸೇವೆಗಳ ಮಹತ್ವದ ಬಗ್ಗೆ ಸರಿಯಾದ ಅರಿವು ಇಲ್ಲ. ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಅತ್ಯುತ್ತಮ ತುರ್ತು ಚಿಕಿತ್ಸೆ ಲಭ್ಯವಿದೆ. ಅತ್ಯಂತ ಸಮರ್ಥ ಮತ್ತು ಅನುಭವಿ ತಜ್ಞವೈದ್ಯರ ತಂಡ ಸದಾ ಕಾರ್ಯಸನ್ನದ್ಧವಾಗಿರುತ್ತದೆ. ಜನ ತುರ್ತು ಪರಿಸ್ಥಿತಿಗಳಲ್ಲಿ ಇದರ ಪ್ರಯೋಜನ ಪಡೆಯಬೇಕು ಎಂದರು.
ಕಾಹೆರನ ಹೊಸ ಯೋಜನೆಗಳ ನಿರ್ದೇಶಕ ಡಾ.ವಿ.ಡಿ.ಪಾಟೀಲ ಮಾತನಾಡಿ, ಆಸ್ಪತ್ರೆಯ ತುರ್ತು ವಿಭಾಗವೇ ಹೊರಗಿನ ಜನರಿಗೆ ಆಸ್ಪತ್ರೆಯ ಮೊದಲ ಮುಖ. ರೋಗಿಗಳು ಆಸ್ಪತ್ರೆಗೆ ಬಂದಾಗ ಮೊದಲ ಅನುಭವ ಇದೇ ವಿಭಾಗದಿಂದ ಆರಂಭವಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಗಳು ಮಾನಸಿಕ ಒತ್ತಡದಲ್ಲಿರುತ್ತಾರೆ. ಅವರ ಮನಸ್ಥಿತಿಯನ್ನು ಸರಿಯಾಗಿ ನಿರ್ವಹಿಸುವ ಜವಾಬ್ದಾರಿ ವೈದ್ಯರ ಮೇಲಿದ್ದು, ಸಂವಹನ, ಪಾರದರ್ಶಕತೆ ಮತ್ತು ನಂಬಿಕೆ ಮೂಡಿಸುವುದು ಮುಖ್ಯ ಎಂದು ತಿಳಿಸಿದರು.
ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕ ಡಾ.ಮಾಧವ ಪ್ರಭು ಮಾತನಾಡಿ, ತುರ್ತು ಪರಿಸ್ಥಿತಿ ಎದುರಾದಾಗ ಕೆಲವರು ಕೆಲವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಇನ್ನೂ ಕೆಲವರು ಅಹಂಕಾರದಿಂದ ವರ್ತಿಸುವುದು ಕೆಲವೊಮ್ಮೆ ಹಿಂಸಾಚಾರಕ್ಕೆ ಕಾರಣವಾಗುತ್ತದೆ. ಅದನ್ನು ನಿರ್ವಹಿಸಲು ಮೃದು ಕೌಶಲ ತರಬೇತಿ ನೀಡಿ ವೈದ್ಯರನ್ನು ರಕ್ಷಿಸುವ ಕಾರ್ಯ ಮಾಡಲಾಗುತ್ತದೆ. ರೋಗಿಗಳಿಗೆ ಉತ್ತಮ ಅನುಭವ ಮತ್ತು ಉತ್ತಮ ಚಿಕಿತ್ಸೆ ನೀಡುವ ಸುರಕ್ಷಿತ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
ಡಾ.ಎಂ.ವಿ.ಜಾಲಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ.ಶಿವಾನಂದ ಬುಬನಾಳೆ, ಡಾ.ಆರ್.ಎಸ್.ಮುಧೋಳ, ಡಾ.ರವಿ ಜತ್ತಿ, ಡಾ.ರೇಖಾ ಪಾಟೀಲ, ಡಾ.ಜ್ಞಾನೇಶ ಕಾಂಬಳೆ, ಡಾ.ಬಸವರಾಜ ಬಿಜ್ಜರಗಿ, ಡಾ.ಮಹೇಶ ಹಟ್ಟಿ, ಡಾ.ಸಚಿನ ವಾಲಿ, ಜನಸಂಪರ್ಕಾಧಿಕಾರಿ ಗಂಗಾಧರ ದೇಶನೂರ, ಮಾರ್ಕೆಟಿಂಗ್ ವಿಭಾಗದ ನಿಖಿಲ ಸಾವಂತ ಇತರರಿದ್ದರು.
ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಶೈಲೇಶ ಉದಪುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಅಜಯ ಪವಾರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net