ಜಾತಿ ವ್ಯವಸ್ಥೆ ನಿರ್ಮೂಲನೆಗಾಗಿ ಪಾವನ ಮಂದಿರ ನಿರ್ಮಿಸಿದ ಸಾವರ್ಕರ್
ಬೇಲೂರಲ್ಲಿ ವೀರ ಸಾವರ್ಕರ್ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಡಾ.ಸಂತೋಷ್, ರಾಜು, ಕೇಶವಮೂರ್ತಿ ಹತ್ವಾರ್, ಗುಂಡಣ್ಣ, ಮಲ್ಲಿಕಾರ್ಜುನ ಮೆಡಿಕಲ್ ಮಹೇಶ್, ರಮೇಶ್ ಇದ್ದರು.
ಬೇಲೂರು: ಸ್ವಾತಂತ್ರೃ ಹೋರಾಟಗಾರ ವೀರ ಸಾವರ್ಕರ್ ಜನ್ಮ ದಿನದ ಅಂಗವಾಗಿ ದೇಶಭಕ್ತರ ಬಳಗದಿಂದ ಪಟ್ಟಣದ ಮಲ್ಲಿಕಾರ್ಜುನ ಮೆಡಿಕಲ್ ಮುಂಭಾಗ ಗುರುವಾರ ವೀರ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ದೇಶಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ಮಾತನಾಡಿ, ಶಾಲಾ ಪಠ್ಯ ಪುಸ್ತಕಗಳಲ್ಲಿ ವೀರ ಸಾವರ್ಕರ್, ಭಗತ್ ಸಿಂಗ್ ಹಾಗೂ ಸುಭಾಷ್‌ಚಂದ್ರ ಬೋಸ್‌ರಂತಹ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾಹಿತಿ ಇಲ್ಲದಿರುವುದು ವಿಷಾದದ ಸಂಗತಿ. ವೀರ ಸಾವರ್ಕರ್ ಪುಣೆಯಲ್ಲಿ ಜನಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಇಂಗ್ಲೆಂಡ್‌ನಲ್ಲಿಯೂ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದ್ದರು. ನಂತರ ಬ್ರಿಟಿಷರು ಅವರನ್ನು ಅಂಡಮಾನ್ ನಿಕೋಬಾರ್‌ನಲ್ಲಿನ ಕಾಲಾಪಾನಿ ಜೈಲಿಗೆ ಕಳುಹಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಿದರು ಎಂದು ಸ್ಮರಿಸಿದರು.
ಸಮಾಜದಲ್ಲಿದ್ದ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಪಾವನ ಮಂದಿರ ನಿರ್ಮಿಸಿ ಸಾಮಾಜಿಕ ಸುಧಾರಣೆಗೆ ವೀರ ಸಾವರ್ಕರ್ ಕೈ ಜೋಡಿಸಿದ್ದರು. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆ ಹಿಂದಿನ ರಾಜಕೀಯ ಮತ್ತು ಸಾಮಾಜಿಕ ಕಾರಣಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದ ಕ್ಷಮಾದಾನ ಪತ್ರಗಳು ಹೇಡಿತನದಿಂದ ಬರೆಯಲ್ಪಟ್ಟದ್ದಲ್ಲ. ಬದಲಾಗಿ ಹೊರಬಂದು ಸ್ವಾತಂತ್ರ್ಯ ಹೋರಾಟವನ್ನು ಮುಂದುವರಿಸಲು ಅನುಸರಿಸಿದ ಒಂದು ರಣತಂತ್ರವಾಗಿತ್ತು ಎಂದರು.
ಉದ್ಯಮಿ ರಾಜು ಮಾತನಾಡಿ, ಸಮಾಜದಲ್ಲಿ ದೇಶಭಕ್ತಿ, ರಾಷ್ಟ್ರ ಪ್ರೇಮದ ಮೌಲ್ಯಗಳನ್ನು ಯುವಜನತೆಗೆ ಪರಿಚಯಿಸುವುದು ಅಗತ್ಯ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ದೇಶ ಸೇವೆಯನ್ನು ಇಂದಿನ ಪೀಳಿಗೆ ಅರಿತು ಕೊಳ್ಳಬೇಕಿದೆ. ಶಾಲಾ-ಕಾಲೇಜುಗಳಲ್ಲಿ ದೇಶಭಕ್ತಿ ಕುರಿತ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದರು.
ದೇಶಭಕ್ತರ ಬಳಗದ ಕೇಶವಮೂರ್ತಿ ಹತ್ವಾರ್, ಗುಂಡಣ್ಣ, ಮಲ್ಲಿಕಾರ್ಜುನ ಮೆಡಿಕಲ್ ಮಹೇಶ್, ರಮೇಶ್, ಬಿಜೆಪಿ ಯುವ ಮೋರ್ಚಾದ ಸುಮನ್, ಶ್ರೀನಿವಾಸ್ ಇತರರಿದ್ದರು.