ಕಲಬುರಗಿ ಸಮೀಪದ ನವನಿಹಾಳದಲ್ಲಿರುವ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಮಾಹಿತಿ
ಉಚಿತ ಶಿಕ್ಷಣ, ಆರೋಗ್ಯ ಸೇವೆ
ಕಲಬುರಗಿ: ವಸುಧೈವ ಕುಟುಂಬಕಂ ಪರಿಕಲ್ಪನೆಯೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯ ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದ ಸಂಸ್ಥೆ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಗುರಿಯೊಂದಿಗೆ ಶಿಕ್ಷಣ, ಆರೋಗ್ಯ ಮತ್ತು ಶಾಲಾ ವಿದ್ಯಾರ್ಥಿಗಳ ಪೌಷ್ಟಿಕಾಂಶ ಕ್ಷೇತ್ರಗಳಲ್ಲಿ ಉಚಿತ ಸೇವೆ ಮಾಡುತ್ತಿದೆ.
ದೇಶವಷ್ಟೇ ಅಲ್ಲದೆ ಹಲವು ರಾಷ್ಟ್ರಗಳಲ್ಲಿ ಲಾಂತರ ಜನರ ಬದುಕಿನಲ್ಲಿ ಆಶಾಕಿರಣವಾಗಿದೆ. ಅಧ್ಯಾತ್ಮ ಸಾಧನೆಗೆ ಸೇವಾ ಪರಂಪರೆ ಹೊಸ ಭಾಷ್ಯ ಬರೆದಿದೆ. ಸತ್ಯಸಾಯಿ ಗ್ರಾಮ ಸ್ಥಾಪನೆಗೊಂಡು ಐದು ದಶಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಹಾಗೂ ನಾರಾಯಣ ಭಟ್ ಜನ್ಮ ಶತಮಾನೋತ್ಸವ ಒಟ್ಟಿಗೆ ಮಾಡಲಾಗುವುದು ಎಂದು ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ನವನಿಹಾಳದಲ್ಲಿರುವ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದಲ್ಲಿ ಬುಧವಾರ ಕಲಬುರಗಿ ನಂತರ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಮಂಗಳೂರು ಸೇರಿ ಎಲ್ಲ ಜಿಲ್ಲೆಗಳಲ್ಲಿ ಸುವರ್ಣ ಮಹೋತ್ಸವ ನಿಮಿತ್ತ ಮಾನವೀಯ ಸೇವೆ ಸಾಕಾರಗೊಳಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಮಲಾಪುರ ಹತ್ತಿರದ ನವನಿಹಾಳದಲ್ಲಿರುವ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದಲ್ಲಿ 6ನೇ ತರಗತಿಯಿಂದ ಪಿಜಿವರೆಗೆ ಓದಲು ಅವಕಾಶ ಕಲ್ಪಿಸಲಾಗಿದೆ. ಬಹುಪಾಲು ವಿದ್ಯಾರ್ಥಿಗಳು ಗ್ರಾಮೀಣ ಮತ್ತು ಬಡವರಿದ್ದಾರೆ. ಸಂಸ್ಥೆಯಡಿ ನಾಡಿನ ವಿವಿಧೆಡೆ 27 ಕ್ಯಾಂಪಸ್ಗಳಲ್ಲಿ 4000ಕ್ಕೂ ಅಧಿಕ ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಶ್ರೀ ಮಧುಸೂದನ ಸಾಯಿ ವೈದ್ಯಕಿಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಾರ್ವಜನಿಕರಿಗೆ ಎಲ್ಲ ತೆರನಾದ ವೈದ್ಯಕಿಯ ಸೇವೆ ಮತ್ತು ಕಲಿಕೆಯನ್ನು ಉಚಿತವಾಗಿ ನೀಡುತ್ತಿದೆ. ಆಸ್ಪತ್ರೆಯಲ್ಲಿ ಬಿಲ್ ಕೌಂಟರ್ ಇಲ್ಲ. ಎಲ್ಲವನ್ನು ಸಂಸ್ಥೆ ಭರಿಸುವ ಮೂಲಕ ಮಾನವೀಯ ಸೇವೆ ಸಲ್ಲಿಸುತ್ತ ಜಾಗತಿಕವಾಗಿ ಗಮನಸೆಳೆದಿದೆ. ನೈಜೇರಿಯಾ ಸೇರಿ ಹಲವೆಡೆ ಆಸ್ಪತ್ರೆ ಆರಂಭಿಸಲಾಗಿದೆ ಎಂದು ಹೇಳಿದರು.
ಶ್ರೀ ಸತ್ಯಸಾಯಿ ಬಾಬಾ ಅವರ ಆಶಯ ಮತ್ತು ಮಾರ್ಗದರ್ಶನದಲ್ಲಿ ರಾಜ್ಯದ 18 ಜಿಲ್ಲೆಗಳಲ್ಲಿ ಸಂಸ್ಥೆ ಆಸ್ಪತ್ರೆ ಆರಂಭಿಸಿದ್ದು, ಉಳಿದೆಡೆಯೂ ಸ್ಥಾಪಿಸಲಾಗುವುದು. ಕಲಬುರಗಿಯಲ್ಲೂ ದೊಡ್ಡ ಪ್ರಮಾಣದಲ್ಲಿ ಆಸ್ಪತ್ರೆ ಆರಂಭಿಸುವ ಯೋಜನೆ ಇದ್ದು, ಭಕ್ತರಿಂದ ನೆರವು ನಿರೀಕ್ಷಿಸಲಾಗುತ್ತಿದೆ. ರಾಜ್ಯ ಸೇರಿ ದೇಶದ ಒಂದು ಕೋಟಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಸಾಯಿಶ್ಯೂರ್ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಸದ್ಗುರು ಶ್ರೀ ಮಧುಸೂದನ ಸಾಯಿ ದೂರದ ಛತ್ತೀಸ್ಗಢದಲ್ಲಿ ಜನಿಸಿದರೂ ರಾಜ್ಯದ ಜನರ ಸೇವೆ ಮಾದರಿಯಾಗಿ ಮಾಡುತ್ತ ಬರುತ್ತಿದ್ದಾರೆ. ಅವರ ನೇತೃತ್ವದಲ್ಲಿ ಸಂಸ್ಥೆ ಮಾನವೀಯ ಸೇವೆ ಮುಂದುವರಿಸಿದ್ದು, ಇನ್ನಷ್ಟು ವಿಸ್ತರಿತ ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ನರಸಿಂಹಮೂರ್ತಿ ಹೇಳಿದರು. ಶ್ರೀ ಸತ್ಯಸಾಯಿ ವಿವಿ ಕುಲಪತಿ ಪ್ರೊ.ಶ್ರೀಕಂಠ ಮೂರ್ತಿ ಇದ್ದರು.