ಆನೇಕಲ್ ಸಮೀಪದ ಕಾವಲ ಹೊಸಹಳ್ಳಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಸಂಘಟನೆ ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಸಬ್ ಮಂಗಲ ರವಿ, ಪದಾಧಿಕಾರಿಗಳಾದ ಹರಿನಗರ ಬಸವರಾಜು, ಆರ್.ವೆಂಕಟೇಶ್, ಎ.ಲವ, ರಜಿಯಾಬೇಗಂ, ರಾಜಪ್ಪ, ಚಿರಂಜೀವಿ, ಜ್ಯೋತಿ, ಪರಶುರಾಮ್, ಬಿ.ಆರ್ ಮಂಜುನಾಥ್, ನಾಗರಾಜು, ಶ್ರೀರಾಮ್, ಬಳ್ಳೂರು ರಮೇಶ್ ಇದ್ದರು.
ಆನೇಕಲ್ : ಉತ್ತಮ ಸಮಾಜ ನಿರ್ಮಿಸಲು ಹಾಗೂ ಭ್ರಷ್ಟರ ವಿರುದ್ಧ ಹೋರಾಡಲು ಸಂಘಟನೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪ್ರಜಾ ವಿಮೋಚನ ಚಳವಳಿ ಸಂಘಟನೆ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಹೇಳಿದರು.
ಕಾವಲ ಹೊಸಹಳ್ಳಿ ಅಂಬೇಡ್ಕರ್ ಭವನದಲ್ಲಿ ಪ್ರಜಾ ವಿಮೋಚನ ಚಳವಳಿ ಸಂಘಟನೆಯಿಂದ ಆಯೋಜಿಸಿದ್ದ "ಅಂಬೇಡ್ಕರ್ ವಿಚಾರಧಾರೆ ಮತ್ತು ಸಂಘಟನೆ ಪ್ರಬಲಗೊಳಿಸುವುದರಲ್ಲಿ ನನ್ನ ಜವಾಬ್ದಾರಿ' ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ನಾವು ಸಂಘಟಿತರಾಗದಿದ್ದರೆ ಬಲಾಢ್ಯರು ಹಾಗೂ ಭ್ರಷ್ಟಾಚಾರದ ವಿರುದ್ಧ ಸಿಡಿದೆಳಲು ಸಾಧ್ಯವಿಲ್ಲ. ಸದ್ಯ ಸಮಾಜದಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡುವ ಪರಿಸ್ಥಿತಿ ಇದ್ದು, ಎಲ್ಲರೂ ಸಂಘಟಿತರಾಗಬೇಕು ಎಂದರು.
ಸಮಸಮಾಜ ನಿರ್ಮಿಸಲು ಅಂಬೇಡ್ಕರ್ ವಿಚಾರಧಾರೆ ಮತ್ತು ಆದರ್ಶ ಅಗತ್ಯ. ಶಿಕ್ಷಣ, ಸಂಘಟನೆ, ಹೋರಾಟ ಎನ್ನುವ ಮೂರು ಮೂಲ ಮಂತ್ರಗಳನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ. ಈ ಮಂತ್ರಗಳು ಜೀವನದ ಭಾಗವಾಗಬೇಕು. ಪ್ರತಿಯೊಬ್ಬರೂ ಅವರ ಸಿದ್ಧಾಂತ ಜೀವನದಲ್ಲಿ ಅಳವಡಿಸಿಕೊಂಡು ಸಮಾನತೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.