ಅನಲಾಗ್/ನಾನ್ ಡೈರಿ ಪನೀರ್ ಉತ್ಪನ್ನ ಮಾರಾಟ ಒಂದು ವರ್ಷ ಅವಧಿಗೆ ನಿಷೇಧ: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆದೇಶ- paneer products banned

ನಾನ್ ಡೈರಿ ಪನೀರ್‌ ಉತ್ಪನ್ನ ನಿಷೇಧ
ನಾನ್ ಡೈರಿ ಪನೀರ್‌ ಉತ್ಪನ್ನ ನಿಷೇಧ
Published on

ಬೆಂಗಳೂರು: ರಾಜ್ಯಾದ್ಯಂತ ಕಳಪೆ ಆಹಾರ ಮತ್ತು ನಕಲಿ ಔಷಧಗಳ ವಿರುದ್ಧ ಸಮರ ಸಾರಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಸಾರ್ವಜನಿಕರ ಆರೋಗ್ಯ ಮತ್ತು ಗ್ರಾಹಕರ ಹಿತಾಸಕ್ತಿ ದೃಷ್ಟಿಯಿಂದ ಪನೀರ್ ಹೆಸರಿನಲ್ಲಿ ಮಾರಾಟವಾಗುತ್ತಿರುವ ಅನಲಾಗ್/ನಾನ್ ಡೈರಿ ಪನೀರ್‌ನ ಉತ್ಪಾದನೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ಸಾಗಣೆ, ಚಿಲ್ಲರೆ ಮಾರಾಟ ಮತ್ತು ಮಾರಾಟವನ್ನು ಒಂದು ವರ್ಷದ ಅವಧಿವರೆಗೆ ನಿಷೇಧಿಸಿ ಆದೇಶ ಹೊರಡಿಸಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಪ್ರಕಾರ ಪನೀರ್ ಎಂಬುದು ಹಾಲಿನಿಂದ ತಯಾರಿಸಲಾಗುವ ಪ್ರಮಾಣೀಕೃತ ಆಹಾರ ಉತ್ಪನ್ನವಾಗಿದೆ. ಪನೀರ್‌ನಲ್ಲಿ ಹಾಲಿನ ಕೊಬ್ಬು ಬದಲಿಗೆ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರೆ ನಾನ್ ಡೈರಿ ಪದಾರ್ಥಗಳ ಬಳಸುವುದನ್ನು ಅನುಮತಿಸಿಲ್ಲ.
ರಾಜ್ಯದ ಹಲವೆಡೆ ಪರೀಕ್ಷಿಸಲಾಗಿದ್ದ ಪನೀರ್ ಮಾದರಿಗಳಲ್ಲಿ ಯಾವುದೇ ಕಲಬೆರಕೆ ಕಂಡುಬಂದಿಲ್ಲ. ಪನೀರ್‌ನಲ್ಲಿ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರ ಡೇರಿ ಪದಾರ್ಥಗಳೊಂದಿಗೆ ಕಲಬೆರಕೆ ಇಲ್ಲದಿದ್ದರೂ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಈ ಉತ್ಪನ್ನಗಳನ್ನು ಬಳಸುವುದು, ಸಂಗ್ರಹ ಅಥವಾ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಇಲಾಖೆ ಉಲ್ಲೇಖಿಸಿದೆ.
ಯಾವುದೇ ಹೋಟೆಲ್, ರೆಸ್ಟೋರೆಂಟ್‌ಗಳು ಅಥವಾ ಆಹಾರ ವ್ಯವಹಾರ ನಡೆಸುವ ಸಂಸ್ಥೆಗಳು ತಮ್ಮ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಅನಲಾಗ್/ನಾನ್ ಡೇರಿ ಪನೀರ್ ಉತ್ಪನ್ನ ಬಳಸುವುದು, ಸಂಗ್ರಹ ಅಥವಾ ಮಾರಾಟ ಮಾಡುವಂತಿಲ್ಲ. ಈ ನಿಷೇಧವು ನಿಗದಿಪಡಿಸದ ಮತ್ತು ಪ್ರಮಾಣೀಕರಿಸದ ಡೇರಿ ಅನಲಾಗ್ ಉತ್ಪನ್ನಗಳಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ ಪ್ರತೇಕ ಮಾನದಂಡ ಹೊಂದಿರುವ ‘ಫ್ರೋಜನ್ ಡೆಸರ್ಟ್’, ’ಪ್ರೊಸೆಡ್ಡ್ ಚೀಸ್’ ಹಾಗೂ ’ಮಿಕ್ಸ್ಡ್ ಫ್ಯಾಟ್ ಸ್ಪ್ರೆಡ್’ ಸೇರಿ ಮುಂತಾದ ಉತ್ಪನ್ನಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಈ ಆದೇಶವನ್ನು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಮತ್ತು ಆಹಾರ ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳು ಕಡ್ಡಾಯವಾಗಿ ಇದನ್ನು ಪಾಲಿಸಬೇಕೆಂದು ಇಲಾಖೆ ಸೂಚಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net