

ನ
ಜನಗೂಡು:
ನಗರದ ನಂದಿ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಸಂಜೆ ಹವ್ಯಾಸಿ ಕಲಾವಿದರ ಬಳಗದಿಂದ ಗಾನ ಸರಸ್ವತಿ ದಿ.ಎಸ್.ಜಾನಕಿ ಅಮ್ಮನವರ ನೆನಪಿನಾರ್ಥ ‘ಗಾನ ಕೋಗಿಲೆಗೆ ಭಾವ ನಮನ ’ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಾನಕಿ ಅಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಿನಿಮಾ ನಿರ್ಮಾಪಕ ಮುಳ್ಳೂರು ಗುರುಪ್ರಸಾದ್ ಹಾಗೂ ಸುರೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮುಳ್ಳೂರು ಗುರು ಪ್ರಸಾದ್, ಜಾನಕಿ ಅಮ್ಮ ಎಂದರೆ ಕೇವಲ ಧ್ವನಿಯಲ್ಲ, ಅದೊಂದು ದೈವಿಕ ಅನುಭೂತಿ. ಅವರು ಹಾಡಿದ ಭಕ್ತಿಗೀತೆಗಳು ನಮಗೆ ಪ್ರಶಾಂತತೆ ನೀಡಿದರೆ, ಅವರ ಪ್ರೇಮಗೀತೆಗಳು ನವಿರಾದ ಭಾವನೆಗಳನ್ನು ಉದ್ದೀಪಿಸುತ್ತದೆ. ಅವರ ಧ್ವನಿಯಲ್ಲಿದ್ದ ದೊಡ್ಡ ವಿಶೇಷವೆಂದರೆ ‘ಭಾವನೆಗಳ ವೈವಿಧ್ಯತೆ’. ಅವರ ಕಂಠದಲ್ಲಿ ಪ್ರತಿಯೊಂದು ಭಾವವೂ ಜೀವಂತವಾಗಿ ಮೂಡಿಬರುತ್ತಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹತ್ತಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ, ಭಾಷೆಯ ಗಡಿಗಳನ್ನು ಮೀರಿದ ಧ್ವನಿ ಅವರದ್ದು ಎಂದು ಬಣ್ಣಿಸಿದರು.
ಡಾ. ರಾಜ್‌ಕುಮಾರ್, ಪಿ. ಬಿ.ಶ್ರೀನಿವಾಸ್ ಮತ್ತು ಎಸ್. ಪಿ.ಬಾಲಸುಬ್ರಹ್ಮಣ್ಯಂ ಅವರ ಜತೆ ಜಾನಕಿ ಅಮ್ಮ ಹಾಡಿದ ಯುಗಳ ಗೀತೆಗಳು ಎಂದಿಗೂ ಅಜರಾಮರ. ಅಂದಿನ ಕಾಲದ ಹಾಡುಗಳಲ್ಲಿ ಸಾಹಿತ್ಯಕ್ಕೆ ಮೊದಲ ಆದ್ಯತೆ ಇರುತ್ತಿತ್ತು. ಹಂಸಲೇಖ, ಜಿ.ಕೆ.ವೆಂಕಟೇಶ್, ಉಪೇಂದ್ರ ಕುಮಾರ್ ಅವರಂತಹ ದಿಗ್ಗಜರ ಸಂಗೀತದಲ್ಲಿ, ಜಾನಕಿ ಅಮ್ಮನವರ ಧ್ವನಿ ಸೇರಿದಾಗ ಅದೊಂದು ಇತಿಹಾಸವಾಗುತ್ತಿತ್ತು. ಅಂದಿನ ಹಾಡುಗಳು ಕಿವಿಯ ಮೂಲಕ ನೇರವಾಗಿ ಹೃದಯವನ್ನು ತಲುಪುತ್ತಿದ್ದವು. ಆದ್ದರಿಂದಲೇ ದಶಕಗಳು ಕಳೆದರೂ ಇಂದಿಗೂ ಆ ಹಾಡುಗಳು ಇನ್ನೂ ಹಸಿರಾಗಿವೆ ಎಂದರು.
ವಕೀಲ ಸುರೇಶ ಮಾತನಾಡಿ, ಜಾನಕಿ ಅಮ್ಮನವರಿಗೆ ಸರಸ್ವತಿ ತಾನಾಗಿಯೇ ಒಲಿದಿದ್ದಾಳೆ. ದಕ್ಷಿಣ ಭಾರತದ ಪ್ರಾಯಶಃ ಎಲ್ಲಾ ಭಾಷೆಗಳಲ್ಲೂ ಅವರ ಸುಮಧುರ ಗೀತೆಗೆ ತಲೆ ತೂಗದವರು ಯಾರು ಇಲ್ಲ. ಸಾವಿರಾರು ಗೀತೆಗಳು ಹಾಡಿರುವ ಅವರ ಧ್ವನಿಯಲ್ಲಿಯೇ ಒಂದು ಮಾಂತ್ರಿಕತೆ ತುಂಬಿತ್ತು ಎಂದರು.
ವಿವಿಧ ಗಾಯಕರು ಸುಮಾರು ನೂರಕ್ಕೂ ಹೆಚ್ಚು ಎಸ್.ಜಾನಕಿ ಅವರು ಹಾಡಿರುವ ಗೀತೆಗಳನ್ನು ಹಾಡಿದರು.
ಹವ್ಯಾಸಿ ಕಲಾವಿದರ ಬಳಗದ ತಗಡೂರು ಗೋಪಿನಾಥ್, ಇಂದಿರೇಶ್, ಸೌಮ್ಯಶ್ರೀ, ಭಕ್ತ ವತ್ಸಲಾ, ರಾಮಪ್ರಸಾದ್, ಸಾತ್ವಿಕ್, ಜಯ ಹಾಗೂ ನಾಗಲಕ್ಷ್ಮೀ ಇತರರು ಪಾಲ್ಗೊಂಡಿದ್ದರು.