ಗ್ರಾಮೀಣ ಕ್ರೀಡಾ ಹಬ್ಬ ಈಶ ಗ್ರಾಮೋತ್ಸವ ಚಾಲನೆ: 80 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ- Isha Gramotsava

ಈಶ ಗ್ರಾಮೋತ್ಸವ
ಈಶ ಗ್ರಾಮೋತ್ಸವ
Published on
ಬೆಂಗಳೂರು: ಸದ್ಗುರುಗಳ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ದೇಶದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಹಬ್ಬವಾದ ‘ಈಶ ಗ್ರಾಮೋತ್ಸವ’ ತನ್ನ 18ನೇ ಆವೃತ್ತಿಯನ್ನು ದೇಶಾದ್ಯಂತ ವಿಸ್ತರಿಸಲಾಗಿದೆ. ಈ ಮೂಲಕ ಕರ್ನಾಟಕದ ಹಳ್ಳಿಗಳಲ್ಲಿ ಕ್ರೀಡಾ ಮನೋಭಾವ ಜಾಗೃತಗೊಳಿಸಲು ಸಜ್ಜಾಗಿದೆ.
ದಕ್ಷಿಣ ಭಾರತದ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಕ್ರೀಡಾಕೂಟವು ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪುದುಚೇರಿಯೊಂದಿಗೆ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಓರಿಸ್ಸಾ ಮತ್ತು ಮಹಾರಾಷ್ಟ್ರಗಳಲ್ಲಿ ನಡೆಯಲಿದೆ. ಕರ್ನಾಟಕದ 18 ಜಿಲ್ಲೆಗಳಲ್ಲಿ ಕ್ಲಸ್ಟರ್ ಮಟ್ಟದ ಪಂದ್ಯಗಳು ನಡೆಯಲಿವೆ. ಸಾವಿರಾರು ಗ್ರಾಮೀಣ ಕ್ರೀಡಾಪಟುಗಳಿಗೆ ಒಟ್ಟು 1 ಕೋಟಿ ರೂ.ಗೂ ಅಧಿಕ ನಗದು ಬಹುಮಾನ ಗೆಲ್ಲುವ ಅವಕಾಶವಿದೆ.
ಈಶ ಗ್ರಾಮೋತ್ಸವದಲ್ಲಿ ದೇಶದ 40 ಸಾವಿರಕ್ಕೂ ಅಧಿಕ ಗ್ರಾಮಗಳ ಅಂದಾಜು 7 ಸಾವಿರ ತಂಡಗಳಿಂದ 15 ಸಾವಿರ ಮಹಿಳಾ ಸ್ಪರ್ಧಿಗಳು ಸೇರಿ 80 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಕರ್ನಾಟಕವು ಈ ಕ್ರೀಡಾಕೂಟದಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಲ್ಲಿ ಒಂದಾಗಿದೆ. ಈ ವರ್ಷವೂ ಗ್ರಾಮೀಣ ಸಮುದಾಯಗಳು ಕ್ರೀಡೆಯ ಮೂಲಕ ಒಂದಾಗುವುದರಿಂದ ಅತ್ಯುತ್ಸಾಹದ ಭಾಗವಹಿಸುವಿಕೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.
ಈಶ ಗ್ರಾಮೋತ್ಸವ ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್, ಕೇಂದ್ರ ಸಚಿವ ಡಾ.ಮನ್ಸುಖ್ ಮಾಂಡವೀಯಾ ಮತ್ತು ಬ್ಯಾಂಡ್ಮಿಟನ್ ಕ್ರೀಡಾಪಟು ಸೈನಾ ನೆಹ್ವಾಲ್ ಸೇರಿ ಮತ್ತಿತರರಿದ್ದರು. ಕರ್ನಾಟಕ ಆವೃತ್ತಿಗೆ ಜು.11ರಂದು ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಕಳೆದ ವರ್ಷದ ಚಾಂಪಿಯನ್ ತಂಡಗಳು ಸೇರಿ ಗ್ರಾಮೀಣ ಆಟಗಾರರು, ನಟಿ ಹರಿಪ್ರಿಯಾ, ನಟ ವಸಿಷ್ಠ ಸಿಂಹ ಮತ್ತು ಆರ್‌ಜೆ ಅಮಿತ್ ಅವರೊಂದಿಗೆ ಸಂಭ್ರಮದ ಪ್ರದರ್ಶನ ಪಂದ್ಯವನ್ನು ಆಡಿದರು.ಈ ಪಂದ್ಯಾವಳಿಯನ್ನು ಗ್ರಾಮೀಣ ಪ್ರತಿಭೆಗಳಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ.
ಸೆ.6ಕ್ಕೆ ಫೈನಲ್ ಪಂದ್ಯ:
ರೈತರು, ಮೀನುಗಾರರು, ದಿನಗೂಲಿ ನೌಕರರು, ಕುಶಲಕರ್ಮಿಗಳು, ವಿದ್ಯಾರ್ಥಿಗಳು ಮತ್ತು ಗೃಹಿಣಿಯರು ಒಟ್ಟಾಗಿ ವಾಲಿಬಾಲ್ (ಪುರುಷರು) ಮತ್ತು ಥ್ರೋಬಾಲ್ (ಮಹಿಳೆಯರು) ಪಂದ್ಯಾವಳಿಗಳಲ್ಲಿ ಸ್ಪರ್ಧಿಸಲಿದ್ದು, ಸಾಮೂಹಿಕ ಕೆಲಸ, ಒಟ್ಟಾಗಿ ಪಾಲ್ಗೊಳ್ಳುವ ತಂಡದ ಮನೋಭಾವ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಸಂಭ್ರಮಿಸಲಿದ್ದಾರೆ. ವಿಜೇತ ತಂಡಗಳು ಮುಂದಿನ ಸುತ್ತುಗಳಿಗೆ ಪ್ರವೇಶಿಸಲಿದ್ದು, ಸೆ.6ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಫೈನಲ್ ಪಂದ್ಯ ನಡೆಯಲಿವೆ.ಫೈನಲ್‌ನಲ್ಲಿ ವಿಜೇತರಾಗುವ ವಾಲಿಬಾಲ್ ಮತ್ತು ಥ್ರೋಬಾಲ್ ತಂಡಗಳು ತಲಾ 5 ಲಕ್ಷ, ರನ್ನರ್ಸ್ ಅಪ್ ತಂಡಗಳು ತಲಾ 3 ಲಕ್ಷ ರೂ.ಪಡೆಯಲಿವೆ. 3 ಮತ್ತು 4ನೇ ಸ್ಥಾನ ಪಡೆಯುವ ತಂಡಗಳು ಕ್ರಮವಾಗಿ 1 ಲಕ್ಷ ರೂ ಮತ್ತು 50 ಸಾವಿರ ರೂ.ನಗದು ಬಹುಮಾನ ಸಿಗಲಿದೆ. ಕ್ಲಸ್ಟರ್,ವಿಭಾಗೀಯ ಹಂತಗಳಲ್ಲೂ ನಗದು ಬಹುಮಾನ ನೀಡಲಾಗತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net