ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಸಿಂದಗಿ ತಾಲೂಕು ವಕೀಲರ ಸಂಘ ಹಾಗೂ ಚಿಕ್ಕರೂಗಿ ಗ್ರಾಮದ ವತಿಯಿಂದ ಹಮ್ಮಿಕೊಂಡ ಕಾನೂನು ಅರಿವು-ನೆರವು ಕಾರ್ಯಕ್ರಮ ನಡೆಯಿತು. ನಾಗೇಶ್ ಮೋಗೆರ, ಪಂಕಜಾ ಕೊಣ್ಣೂರ, ಎಸ್.ಬಿ. ಪಾಟೀಲ, ಬಿ.ಜಿ. ನೆಲ್ಲಗಿ, ಶ್ರೀಶೈಲ ಮುಳಜಿ ಚಿಕ್ಕರೂಗಿ ಇತರರಿದ್ದರು.
ದೇವರಹಿಪ್ಪರಗಿ:ಇಡೀ ಜಗತ್ತಿನಲ್ಲಿ ಶ್ರೇಷ್ಠವಾದ ಸಂವಿಧಾನ ನಮ್ಮದಾಗಿದ್ದು, ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿರಬೇಕು. ಗ್ರಾಮೀಣ ಭಾಗದ ಜನರ ಜಾಗೃತಿಗಾಗಿ ಕಾನೂನು ಅರಿವು ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಸಿಂದಗಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ನಾಗೇಶ್ ಮೋಗೆರ ಹೇಳಿದರು.
ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಸಿಂದಗಿ ತಾಲೂಕು ವಕೀಲರ ಸಂಘ ಹಾಗೂ ಚಿಕ್ಕರೂಗಿ ಗ್ರಾಮದ ವತಿಯಿಂದ ಹಮ್ಮಿಕೊಂಡ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಯ ಜನರು ಕಾನೂನಿನ ಜ್ಞಾನ ಹೊಂದಬೇಕು. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಎಲ್ಲರೂ ಅಪರಾಧ ಚಟುವಟಿಕೆಗಳಿಂದ ದೂರ ಇರಬೇಕು. ವರದಕ್ಷಿಣೆ ನೀಡುವುದು ಅಪರಾಧ, ತೆಗೆದುಕೊಳ್ಳುವುದು ಅಪರಾಧವಾಗಿದೆ. ವರದಕ್ಷಿಣೆ ಮುಕ್ತ ಗ್ರಾಮವನ್ನಾಗಿಸಲು ತಾವೆಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು.
ನ್ಯಾಯಾಧೀಶೆ ಪಂಕಜಾ ಕೊಣ್ಣೂರ ಮಾತನಾಡಿ, ಚಿಕ್ಕ ಮಕ್ಕಳಿಗೆ ವಾಹನ ಚಾಲನೆ ಮಾಡಲು ಕೊಡಬಾರದು. ಒಂದು ವೇಳೆ ವಾಹನ ನೀಡಿದರೆ ಅದಕ್ಕೆ ನ್ಯಾಯಾಲಯದಿಂದ ದಂಡ ವಿಧಿಸಲಾಗುತ್ತಿದೆ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು ಎಂದು ತಿಳಿಸುತ್ತ, ಹಲವು ಕಾನೂನಾತ್ಮಕ ವಿಚಾರಗಳನ್ನು ತಿಳಿಸಿದರು.
ಸಿಂದಗಿ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ಪಾಟೀಲ, ಸರ್ಕಾರಿ ವಕೀಲ ಬಿ.ಜಿ. ನೆಲ್ಲಗಿ, ನ್ಯಾಯವಾದಿ ಶ್ರೀಶೈಲ ಮುಳಜಿ ಚಿಕ್ಕರೂಗಿ ಮಾತನಾಡಿದರು.
ನ್ಯಾಯವಾದಿಗಳಾದ ಕಾಶಿನಾಥ್ ಚವಾಣ್, ರವಿ ನಾಯಕ, ಬಿ.ಎಸ್. ರಾದಾರ, ಪಿಕೆಪಿಎಸ್ ಅಧ್ಯಕ್ಷ ನಾಗಣ್ಣ ಮುಳಜಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಿವಾನಂದ ಮೂಲಿಮನಿ, ಎಸ್.ಎಂ. ಆನಂದ, ವಿಶ್ವನಾಥ್ ಚಂಡಕಿ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಚಂಡಕಿ, ದೇವಾನಂದ ಬಾಗಲಕೋಟಿ ಇತರರಿದ್ದರು.