RSS ಪಾಕಿಸ್ತಾನಕ್ಕೆ ಜೈ ಎನ್ನುವ ದೇಶವಿರೋಧಿ ಸಂಘವಲ್ಲ: ಪ್ರಿಯಾಂಕ್​ ಖರ್ಗೆಗೆ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು!

RSS ಪಾಕಿಸ್ತಾನಕ್ಕೆ ಜೈ ಎನ್ನುವ ದೇಶವಿರೋಧಿ ಸಂಘವಲ್ಲ: ಪ್ರಿಯಾಂಕ್​ ಖರ್ಗೆಗೆ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು!
RSS ಪಾಕಿಸ್ತಾನಕ್ಕೆ ಜೈ ಎನ್ನುವ ದೇಶವಿರೋಧಿ ಸಂಘವಲ್ಲ: ಪ್ರಿಯಾಂಕ್​ ಖರ್ಗೆಗೆ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು!
Published on

ಪ್ರಮುಖ ಮುಖ್ಯಾಂಶಗಳು

  • ಆರ್​ಆರ್​ಎಸ್​ ನೋಂದಣಿ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರ
  • ಪ್ರಿಯಾಂಕ್ ಖರ್ಗೆ ಅವರೇ ಇತಿಮಿತಿ ಅರಿತು ಕೆಲಸ ಮಾಡಿ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ವಾಗ್ದಾಳಿ
  • ಆರ್‌ಎಸ್‌ಎಸ್ ಕರ್ನಾಟಕ, ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಐವತ್ತು ದೇಶಗಳಲ್ಲಿ ಶಾಖೆಗಳಿದೆ
  • ನೆಹರು, ಇಂದಿರಾ ಗಾಂಧಿಯಿಂದಲೂ ಆರ್​ಎಸ್​ಎಸ್​ ಬ್ಯಾನ್ ಮಾಡಲು ಆಗಲಿಲ್ಲ ಎಂದು ತಿರುಗೇಟು
ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆ, ಡ್ರಗ್ಸ್ ಹಾಗೂ ಭಯೋತ್ಪಾದನೆಯಂತಹ ಗಂಭೀರ ಸವಾಲುಗಳ ಕಡೆಗೆ ಗಮನ ಹರಿಸಬೇಕಾದ ಗೃಹ ಸಚಿವರು, ಆರ್‌ಎಸ್‌ಎಸ್‌ನಂತಹ ( RSS ) ರಾಷ್ಟ್ರಭಕ್ತ ಸಂಘಟನೆಯ ವಿರುದ್ಧ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹಿರಿಯರ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು, ಪ್ರಿಯಾಂಕ್ ಖರ್ಗೆ ಅವರು ತಮ್ಮ ಅಧಿಕಾರದ ಇತಿಮಿತಿಗಳನ್ನು ಅರಿತು ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ ಎಂದು ಎಚ್ಚರಿಸಿದ್ದಾರೆ.
ಆರ್‌ಎಸ್‌ಎಸ್ ಜಾಗತಿಕ ಮಟ್ಟದ ಪ್ರಭಾವವನ್ನು ನೆನಪಿಸಿದ ಕೋಟಾ ಶ್ರೀನಿವಾಸ್ ಪೂಜಾರಿ, ಸಂಘಟನೆಯು ಕೇವಲ ಕರ್ನಾಟಕ ಅಥವಾ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ; ಬದಲಿಗೆ ಜಗತ್ತಿನಾದ್ಯಂತ ಬರೋಬ್ಬರಿ ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿ ಬೆಳೆದಿದೆ ಎಂದು ತಿಳಿಸಿದರು. ಸಂಘದ ಹಿರಿಯರ ವಿರುದ್ಧ ಗೃಹ ಸಚಿವರು ಮಾಡಿರುವ ಟೀಕೆಗಳಿಗೆ ನಾವು ವೈಯಕ್ತಿಕವಾಗಿ ಉತ್ತರ ಕೊಡುವ ಅಗತ್ಯವಿಲ್ಲ, ಆರ್‌ಎಸ್‌ಎಸ್ ಸಂಸ್ಥೆಯೇ ಅದಕ್ಕೆ ತಕ್ಕ ಉತ್ತರ ನೀಡುತ್ತದೆ. ಆರ್‌ಎಸ್‌ಎಸ್ ಎಂದಿಗೂ ಪಾಕಿಸ್ತಾನಕ್ಕೆ ಜೈ ಎನ್ನುವ ದೇಶವಿರೋಧಿ ಸಂಸ್ಥೆಯಲ್ಲ, ಅದು ತಾಯಿ ಭಾರತಿಯ ಸೇವೆಗೆ ಮುಡಿಪಾದ ಸಂಘಟನೆ ಎಂಬುದನ್ನು ಸಚಿವರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಇದೇ ವೇಳೆ ಇತಿಹಾಸದ ಪುಟಗಳನ್ನು ಬಿಚ್ಚಿಟ್ಟ ಸಂಸದರು, ಈ ಹಿಂದೆ ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರು ಸಂಘವನ್ನು ನಿಷೇಧಿಸಿದ್ದರು; ಆದರೆ ಆ ಬಳಿಕ ಅದೇ ನೆಹರು ಅವರೇ ಸಂಘದ ಶಿಸ್ತು ಮತ್ತು ದೇಶಭಕ್ತಿಯನ್ನು ಮೆಚ್ಚಿ ಗಣರಾಜೋತ್ಸವದ ಪರೇಡ್‌ನಲ್ಲಿ ಭಾಗವಹಿಸುವಂತೆ ಸ್ವತಃ ಮನವಿ ಮಾಡಿದ್ದರು ಎಂಬುದನ್ನು ನೆನಪಿಸಿದರು. ಆ ನಂತರದ ದಿನಗಳಲ್ಲಿ ಇಂದಿರಾ ಗಾಂಧಿ ಅವರು ಕೂಡ ಸಂಘವನ್ನು ಬ್ಯಾನ್ ಮಾಡಲು ಸಕಲ ಪ್ರಯತ್ನ ನಡೆಸಿದರೂ ಸಹ ಅವರಿಗೆ ಅದು ಸಾಧ್ಯವಾಗಲಿಲ್ಲ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಆಂತರಿಕ ವೈರುಧ್ಯಗಳನ್ನು ತರಾಟೆಗೆ ತೆಗೆದುಕೊಂಡ ಕೋಟಾ ಶ್ರೀನಿವಾಸ್​ ಪುಜಾರಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾವು ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುತ್ತೇವೆ ಎಂದು ಸೌಹಾರ್ದತೆಯ ಮಾತುಗಳನ್ನಾಡುತ್ತಾರೆ. ಆದರೆ, ಮತ್ತೊಂದೆಡೆ ಸದಾ ಸಮಾಜದಲ್ಲಿ ಅಪಪ್ರಚಾರ ಮಾಡುವ ಮತ್ತು ವಿವಾದ ಸೃಷ್ಟಿಸುವ ವ್ಯಕ್ತಿಯನ್ನು ತಂದು ಗೃಹ ಮಂತ್ರಿಯನ್ನಾಗಿ ಕೂರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗೃಹ ಸಚಿವರು ಸಮಾಜ ಒಡೆಯುವ ಹೇಳಿಕೆಗಳನ್ನು ಬಿಟ್ಟು, ರಾಜ್ಯದ ಆಂತರಿಕ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವತ್ತ ಹೆಚ್ಚಿನ ಗಮನ ಹರಿಸಲಿ ಎಂದು ಅವರು ಸಲಹೆ ನೀಡಿದರು.

ನಿಮ್ಮಿಂದ ಏನು ಮಾಡಲು ಸಾಧ್ಯ?

ಆರ್‌ಎಸ್‌ಎಸ್ ನೋಂದಣಿ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ಖಡಕ್ ಕೌಂಟರ್ ನೀಡಿದ ಸಿ.ಟಿ. ರವಿ, ಈ ಹಿಂದೆ ನೆಹರು ಮತ್ತು ಇಂದಿರಾ ಗಾಂಧಿಯವರೇ ಆರ್‌ಎಸ್‌ಎಸ್ ಅನ್ನು ಏನೂ ಮಾಡಲು ಸಾಧ್ಯವಾಗಲಿಲ್ಲ, ನಿಮ್ಮ ತಂದೆ ಗೃಹ ಸಚಿವರಾಗಿದ್ದಾಗಲೂ ಏನೂ ಮಾಡಲಾಗಿಲ್ಲ, ಇನ್ನು ನಿನ್ನೆ ಮೊನ್ನೆ ಸಚಿವರಾದ ನಿಮ್ಮಿಂದ ಏನು ಮಾಡಲು ಸಾಧ್ಯ? ಅಧಿಕಾರ ಶಾಶ್ವತವಲ್ಲ, ನೀವು ಗೂಂಡಾಗಳಂತೆ ವರ್ತಿಸದೆ ಬೆಂಕಿ ಆರಿಸುವ ಕೆಲಸ ಮಾಡಿ ಮತ್ತು ಕಾನೂನು ಸುವ್ಯವಸ್ಥೆ ಹಾಗೂ ದೇಶದ್ರೋಹಿಗಳ ಕಡೆಗೆ ಗಮನ ಹರಿಸಿ ಎಂದು ಎಚ್ಚರಿಸಿದರು.

ನಿಮ್ಮಿಂದ ಗೌರವ ಕಲಿಯುವ ಅಗತ್ಯವಿಲ್ಲ

ಇದೇ ಸಂದರ್ಭದಲ್ಲಿ ರಾಜ್ಯಸಭೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆ ಮಾಡದಿರುವುದನ್ನು ಟೀಕಿಸುತ್ತಿರುವ ಕಾಂಗ್ರೆಸ್‌ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಕಾಂಗ್ರೆಸ್‌ನವರಿಗೆ ಇದ್ದಕ್ಕಿದ್ದಂತೆ ದೇವೇಗೌಡರ ಮೇಲೆ ಹುಟ್ಟಿರುವ ಈ ಮರುಕ ಕೇವಲ ನಾಟಕೀಯ ಎಂದು ವಾಗ್ದಾಳಿ ನಡೆಸಿದ್ದಾರೆ. ಅಂಬೇಡ್ಕರ್, ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಅವರನ್ನೇ ಸರಿಯಾಗಿ ನಡೆಸಿಕೊಳ್ಳದ ಕಾಂಗ್ರೆಸ್‌ನಿಂದ ಬಿಜೆಪಿ ಗೌರವ ಕಲಿಯುವ ಅಗತ್ಯವಿಲ್ಲ ಎಂದ ಅವರು, ದೇವೇಗೌಡರು ಮತ್ತು ಮೋದಿ ಅವರ ನಡುವೆ ಅಣ್ಣ-ತಮ್ಮ, ತಂದೆ-ಮಗನಂತಹ ಸಹಜ ಗೌರವದ ಸಂಬಂಧವಿದೆ ಎಂದು ಸ್ಪಷ್ಟಪಡಿಸಿದರು.

ಸಚಿವ ಶರಣಪ್ರಕಾಶ್ ಪಾಟೀಲ್ ಸಮರ್ಥನೆ

ಆರ್‌ಎಸ್‌ಎಸ್ ನೋಂದಣಿ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಯನ್ನು ಪೂರ್ಣವಾಗಿ ಸಮರ್ಥಿಸಿಕೊಂಡಿರುವ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ದೇಶದಲ್ಲಿ ಯಾವುದೇ ಸಂಸ್ಥೆಯಾದರೂ ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡಬೇಕಾಗುತ್ತದೆ ಹಾಗೂ ಸಮಾಜದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಅಧಿಕೃತ ನೋಂದಣಿ ಅತ್ಯಗತ್ಯ ಎಂದು ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ನಿಲುವು ತಾರ್ಕಿಕವಾಗಿಯೇ ಸರಿ ಇದೆ ಎಂದ ಅವರು, ಕಾನೂನಿನ ಪ್ರಕಾರ ನೋಂದಣಿ ಮಾಡಿಕೊಳ್ಳಲು ಆರ್‌ಎಸ್‌ಎಸ್‌ಗೆ ಇರುವ ಸಮಸ್ಯೆಯಾದರೂ ಏನು ಮತ್ತು ಈ ದೇಶದಲ್ಲಿ ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ ಎಂದಿದ್ದಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net