ದರೋಡೆ ಗ್ಯಾಂಗ್ ಬಂಧನ 6.29 ಕೋಟಿ ಜಪ್ತಿ

cmc robbery banglore
cmc robbery banglore
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಲ್ಲೇ ಹಣ ಬಚ್ಚಿಟ್ಟು ಹೋಗಿದ್ದ ರಾಬರ್ಸ್ ಗ್ಯಾಂಗ್
  • ಕೃತ್ಯಕ್ಕೆ ಇನ್ನೋವಾ ಒಂದೇ ಅಲ್ಲ ಮೂರು ಕಾರು ಬಳಕೆ
  • 200 ಪೊಲೀಸರು ಕಾರ್ಯಾಚರಣೆ
  • ಆಂಧ್ರದ ಕಿಂಗ್‌ಪಿನ್ ಮಾಜಿ ಸೈನಿಕನ ಮಗ ರವಿ
ಬೆಂಗಳೂರು: ರಾಜಧಾನಿಯನ್ನು ಬೆಚ್ಚಿ ಬಿಳಿಸಿದ್ದ 7.11 ಕೋಟಿ ರೂ.ಹಗಲು ದರೋಡೆ ಗ್ಯಾಂಗಿನ 6 ಮಂದಿಯನ್ನು ಪೊಲೀಸರು ಬಂಧಿಸಿ, 7.01 ಕೋಟಿ ರೂ. ವಶಕ್ಕೆ ಪಡೆದಿದ್ದಾರೆ. ದರೋಡೆಯಲ್ಲಿ ಒಟ್ಟು 9 ಜನರು ಪಾಲ್ಗೊಂಡಿ ತಲೆಮರೆಸಿಕೊಂಡಿರುವ ಇಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಗೋವಿಂದಪುರ ಠಾಣೆ ಕಾನ್‌ಸ್ಟೆಬಲ್ ಅಪ್ಪಣ್ಣ ನಾಯ್ಕ, ಸಿಎಂಎಸ್ ಏಜೆನ್ಸಿ ಮಾಜಿ ನೌಕರ ಕೇರಳ ಮೂಲದ ಜೆ.ಕ್ಸೇವಿಯರ್, ಏಜೆನ್ಸಿ ವಾಹನ ಉಸ್ತುವಾರಿ ಹೊತ್ತಿದ್ದ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ರಾಮಾಪುರಂ ಗ್ರಾಮದ ಗೋಪಿ ಅಲಿಯಾಸ್ ಗೋಪಾಲ್ ಪ್ರಸಾದ ಹಾಗೂ ಹೈದ್ರಾಬಾದನಲ್ಲಿ ಕಿಂಗ್‌ಪಿನ್ ರವಿ, ನವೀನ್ ಹಾಗೂ ನೆಲ್ಸನ್ ಬಂಧಿತರು.
ದರೋಡೆ ಪ್ರಕರಣದಲ್ಲಿ ಟ್ರಾವೆಲ್ಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಚಿತ್ತೂರಿನ ರವಿ ಪ್ರಮುಖ ಆರೋಪಿಯಾಗಿದ್ದಾನೆ. ಈತನ ಸಹೋದರ ರಾಕೇಶ್ ಹಾಗೂ ದಿನೇಶ್ ತಲೆಮರೆಸಿಕೊಂಡಿದ್ದಾರೆ. ದರೋಡೆ ಹಿಂದಿನ ಕಿಂಗ್‌ಪಿನ್ ರವಿ ಬಿಎಸ್ಸಿ ವ್ಯಾಸಂಗ್ ಮಾಡಿಕೊಂಡಿದ್ದಾನೆ. ಈತನ ತಂದೆ ಮಾಜಿ ಸೈನಿಕನಾಗಿದ್ದು ದರೋಡೆ ಪ್ರಕರಣದಲ್ಲಿ ಈತನ ಕೈವಾಡವಿದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಲ್ಲದೇ ಈತನ ಕಿರಿಯ ಪುತ್ರ ರಾಕೇಶ್ ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದಾನೆ.

ದರೋಡೆಗೆ 3 ತಿಂಗಳ ಪ್ಲಾನ್
ಸಿಎಂಸಿ ಇನ್ಫೋಸಿಸ್ಟಮ್ ಲಿಮಿಟೆಡ್ ಕಂಪೆನಿಗೆ ಸೇರಿದ ವಾಹನ ಎಟಿಎಂಗಳಿಗೆ ಹಣ ತುಂಬಲು ಹೋಗುತ್ತಿದ್ದನ್ನು ಗಮನಿಸಿ ದರೋಡೆಗೆ 3 ತಿಂಗಳು ಯೋಜನೆ ರೂಪಿಸಿದ್ದರು. ಕೃತ್ಯ ಎಸಗುವ 15 ದಿನ ಮುಂಚಿತವಾಗಿ ಸಿದ್ಧಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಹಲವು ಬಾರಿ ಓಡಾಡಿದ್ದರು. ಸಿಸಿ ಕ್ಯಾಮೆರಾಗಳು ಇಲ್ಲದ ಸ್ಥಳ, ವಾಹನ ಅಡ್ಡಗಟ್ಟಿ ಹಣ ಯಾವ ಕಾರಿನಲ್ಲಿ ಸಾಗಿಸಬೇಕು ಎಂಬ ಕುರಿತು ಗುರುತು ಮಾಡಿಕೊಂಡಿದ್ದರು. ಸಿಎಂಎಸ್ ಕಂಪೆನಿ ಮಾಜಿ ನೌಕರ ಜೆ.ಕ್ಸೇವಿಯರ್, ಎಟಿಎಂಗಳಿಗೆ ಹಣ ಭರ್ತಿ ಮಾಡುವ ಎಲ್ಲ ವಾಹನಗಳ ಉಸ್ತುವಾರಿ ಹೊತ್ತಿದ್ದ ಗೋಪಿಯನ್ನು ಬಳಕೆ ಮಾಡಿಕೊಂಡು ಕೃತ್ಯ ಎಸಗಿದ್ದರು. ಯಾವ ಮಾರ್ಗದಲ್ಲಿ ಹೋಗುವ ವಾಹನದಲ್ಲಿ ಹೆಚ್ಚು ಹಣವಿರುತ್ತದೆ ಎಂಬುದನ್ನು ಗುರುತುಪಡಿಸಿಕೊಂಡು ಡೈರಿ ಸರ್ಕಲ್ ಮಾರ್ಗವಾಗಿ ಬಂದ ವಾಹನ ದರೋಡೆ ಮಾಡಿದ್ದರು.

ಕಾನ್‌ಸ್ಟೆಬಲ್ ರಾಬರ್ಸ್ ಹೇಗೆ ಪರಿಚಯ?

ಕಾನ್‌ಸ್ಟೆಬಲ್ ಅಪ್ಪಣ್ಣ ನಾಯ್ಕ ಮೂಲತ ಶಿವಮೊಗ್ಗ ಜಿಲ್ಲೆಯವನು.2018ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ. ಮಾಜಿ ನೌಕರ ಜೆ.ಕ್ಸೇವಿಯರ್ ಬಾರ್‌ನಲ್ಲಿ ಪರಿಚಯವಾಗಿದ್ದ. ಈ ವೇಳೆ ದೊಡ್ಡ ಮಟ್ಟದಲ್ಲಿ ದರೋಡೆ ಮಾಡಿಕೊಂಡು ಲೈಪ್‌ನಲ್ಲಿ ಸೆಟಲ್ ಮಾಡಿಕೊಳ್ಳಬೇಕು ಎಂದು ಇಬ್ಬರು ಚರ್ಚಿಸಿದ್ದರು. ಈ ವೇಳೆ ಜೆ.ಕ್ಸೇವಿಯರ್, ಸಿಎಂಸಿ ಏಜೆನ್ಸಿ ಬಗ್ಗೆ ಮಾಹಿತಿ ನೀಡಿದ್ದ. ಸಿಸಿಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳುವುದು ಹಾಗೂ ಬೆಂಗಳೂರಿನಿಂದ ಹೇಗೆ ಪರಾರಿಯಾಗಬೇಕು ಎಂಬುದನ್ನು ನಾನು ನೋಡಿಕೊಳ್ಳುತ್ತೇನೆ. ಉಳಿದಿದ್ದನ್ನು ನೀನು ನೋಡಿಕೊಳ್ಳಬೇಕು ಎಂದು ಮಾತನಾಡಿಕೊಂಡಿದ್ದರು. ಎಟಿಎಂಗಳಿಗೆ ಹಣ ತುಂಬುವ ವಾಹನಗಳ ಉಸ್ತುವಾರಿ ಹೊಂದಿದ್ದ ಗೋಪಿಯನ್ನು ಸಂಪರ್ಕಿಸಿ ಕಾನ್‌ಸ್ಟೆಬಲ್ ಸೇರಿ ಆಂಧ್ರ ಪ್ರದೇಶದ ಚಿತ್ತೂರು ಮೂಲದವರನ್ನು ಜೆ.ಕ್ಸೇವಿಯರ್ ಪರಿಚಯ ಮಾಡಿಸಿದ್ದ. ಅಲ್ಲಿಂದ ಯೋಜನೆ ರೂಪಿಸಿ ನ.19 ರಂದು ದರೋಡೆ ಮಾಡಿದ್ದರು.

ಒಂದೂವರೆ ಗಂಟೆ
ನಂತರ ಪೊಲೀಸರಿಗೆ ಮಾಹಿತಿ:

ನ.19 ರಂದು ಮಧ್ಯಾಹ್ನ 12.48ಕ್ಕೆ ಅಶೋಕ ಪಿಲ್ಲರ್ ಬಳಿ ಸಿಎಂಸಿ ವಾಹನ ದರೋಡೆಯಾಗಿದೆ. ಆದರೆ, ಪೊಲೀಸರಿಗೆ ಡಿ.ಜೆ.ಹಳ್ಳಿ ಬಳಿ ಸಿಎಂಸಿ ವ್ಯಾನ್ ಅಡ್ಡಗಟ್ಟಿ ದುಷ್ಕರ್ಮಿಗಳ ಗುಂಪು ದೋಚಿದ್ದಾರೆ ಎಂಬ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ, ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ನಂತರ 1.16ಕ್ಕೆ ಕಮಾಂಡೋ ಸೆಂಟರ್‌ಗೆ ಮಾಹಿತಿ ಬಂದ ಆಧಾರದ ಮೇಲೆ ಹೋಗಿ ಪರಿಶೀಲನೆ ನಡೆಸುವಷ್ಟರಲ್ಲಿ ಒಂದೂವರೆ ಗಂಟೆ ತಡವಾಗಿತ್ತು. ಅಷ್ಟರಲ್ಲಿ ದರೋಡೆಕೋರರು ಬೆಂಗಳೂರು ನಗರ ದಾಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ದರೋಡೆಗೆ ಇನ್ನೋವಾ ಒಂದೇ
ಅಲ್ಲ ಮೂರು ಕಾರು ಬಳಕೆ

ಹಣ ಸಾಗಿಸುತ್ತಿದ್ದ ಸಿಎಂಎಸ್ ವಾಹನ ದರೋಡೆಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದ ಇನ್ನೋವಾ ವಾಹನ ಒಂದೇ ಅಲ್ಲದೇ ಒಟ್ಟು ಮೂರು ವಾಹನದಲ್ಲಿ ದರೋಡೆಕೋರರು ಬಂದಿದ್ದರು. ಪೊಲೀಸರಿಗೆ ದಿಕ್ಕು ತಪ್ಪಿಸುವ ಉದ್ದೇಶದಿಂದ ಇನ್ನೋವಾ ವಾಹನ ಒಂದನ್ನು ಮಾತ್ರ ಸಿಎಂಎಸ್ ವಾಹನದಲ್ಲಿದ್ದ ಸಿಬ್ಬಂದಿಗಳಿಗೆ ಗೊತ್ತಾಗುವ ರೀತಿಯಲ್ಲಿ ಸಂಚು ರೂಪಿಸಿದ್ದರು.

ಎರಡು ದಿನ ಬಳಿಕ ಬೆಂಗಳೂರಿನ
ಬಾಣಸವಾಡಿಯಲ್ಲಿ ಹಣ ಪತ್ತೆ

ಇನ್ನೋವಾ ವಾಹನದೊಂದಿಗೆ 7.11 ಕೋಟಿ ಸಾಗಣೆ ಮಾಡಲಾಗಿದೆ ಎಂದುಕೊಂಡಿದ್ದ ಪೊಲೀಸರಿಗೆ ಮತ್ತೊಂದು ವಾಹನದಲ್ಲಿ ಹಣ ಸಾಗಣೆ ಮಾಡಿದ್ದ ಖದೀಮರು ಬಾಣಸವಾಡಿಯಲ್ಲಿ ವಾಸವಾಗಿದ್ದ ಕಿಂಗ್‌ಪಿನ್ ಆರೋಪಿ ರವಿ ಹಾಗೂ ರಾಕೇಶ್, ಗೋಪಿ ಅವರ ಮನೆಯಲ್ಲಿ ಬಚ್ಚಿಟ್ಟಿದ್ದರು. ಖಾಲಿ ಟ್ರಂಕ್‌ಗಳೊಂದಿಗೆ ಇನ್ನೋವಾ ಕಾರು ಆಂಧ್ರ ಪ್ರದೇಶದ ಚಿತ್ತೂರು ಸಮಿಪದಲ್ಲಿ ನಿಲ್ಲಿಸಿ ದರೋಡೆಕೋರರು ಪರಾರಿಯಾಗಿದರು.

ಪ್ರಕರಣದ ಸವಾಲುಗಳು

ದರೋಡೆಕೋರರ ಪೂರ್ವ ಸಂಚಿನಂತೆ ಯಾರೊಬ್ಬರು ಮೊಬೈಲ್ ಪೋನ್ ಬಳಕೆ ಮಾಡದೆ ಇರುವುದು ಹಾಗೂ ಸಿಸಿ ಕ್ಯಾಮೆರಾ ಇಲ್ಲದ ಸ್ಥಳದಲ್ಲಿ ಸಿಎಂಎಸ್ ವಾಹನ ಅಡ್ಡಗಟ್ಟಿ ಹಣ ದರೋಡೆ ಮಾಡಿರುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ತನಿಖೆಯ ದಿಕ್ಕು ಬದಲಿಸಲು ಹಲವು ಭಷೆಗಳಲ್ಲಿ ಮಾತನಾಡಿರುವುದು. ಪದೇ ಪದೇ ನಂಬರ್ ಪ್ಲೇಟ್‌ಗಳನ್ನು ಬದಲಾವಣೆ ಮಾಡಿಕೊಂಡಿರುವುದು ತನಿಖೆಗೆ ಕಠಿಣವಾಗಿತ್ತು.

5 ರಾಜ್ಯಗಳಲ್ಲಿ ಶೋಧ

ಸಿನಿಮಿಯ ರೀತಿಯಲ್ಲಿ 7.11 ಕೋಟಿ ರೂ. ದರೋಡೆ ಮಾಡಿದ್ದ ಗ್ಯಾಂಗ್ ಪತ್ತೆಗೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಗೋವಾ ಸೇರಿ 5 ರಾಜ್ಯಗಳಲ್ಲಿ ವಿಶೇಷ ತಂಡಗಳು ಶೋಧ ಕಾರ್ಯ ನಡೆಸಿವೆ. 9 ಮಂದಿಯನ್ನು ಬಂಧಿಸಿ ಗುರುತು ಪತ್ತೆ ಮಾಡಿರುವ ಪೊಲೀಸರು ಮೂರು ದಿನದಲ್ಲಿ 30ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
200 ಪೊಲೀಸರು ಕಾರ್ಯಾಚರಣೆ
ದರೋಡೆ ಪ್ರಕರಣ ಭೇದಿಸಲು ದಕ್ಷಿಣ ವಿಭಾಗದ 11 ಪೊಲೀಸ್ ಇನ್ಸ್‌ಪೆಕ್ಟರ್, 2 ಎಸಿಪಿ, ಸಿಸಿಬಿ ವಿಭಾಗದ 6 ಪಿಐ ಸೇರಿ 200ಕ್ಕೂ ಹೆಚ್ಚು ಪೊಲೀಸರು 60 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ.

10 ದಿನ ಕಸ್ಟಡಿಗೆ

ಬಂಧಿತ ಮೂವರು ದರೋಡೆಕೋರರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು 10 ದಿನ ಕಸ್ಟಡಿಗೆ ನೀಡಿದೆ.
"

ಬೆಂಗಳೂರು ನಗರದಲ್ಲಿ ದಿಢೀರ್ ನಡೆದ 7.11 ಕೋಟಿ ರೂ.ಹಗಲು ದರೋಡೆ ಪ್ರಕರಣವನ್ನು ಗಂಭೀರವಾಗಿ ಪಡೆಯಲಾಗಿತ್ತು. ಅದರಂತೆ ಘಟನೆ ನಡೆದು 24 ಗಂಟೆಯಲ್ಲಿ 6 ಆರೋಪಿಗಳ ಬಗ್ಗೆ ಮಾಹಿತಿ ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸದ್ಯ 7.01 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ದರೋಡೆಕೋರರು ರಚಿಸಿದ್ದ ಯೋಜನೆ ನೋಡಿದರೆ ನಮಗೆ ಸಿಗದಂತೆ ಪರಾರಿಯಾಗಬಹುದಿತ್ತು. ಆದರೆ ಕೆಲವು ಸುಳಿವಿನಿಂದ ಬಂಧನ ಮಾಡಲಾಗಿದೆ. ಇನ್ನೂ ಇಬ್ಬರು ಇದರಲ್ಲಿ ಪಾಲ್ಗೊಂಡಿದ್ದಾರೆ. ಅವರಿಗಾಗಿ ಬೇರೆ ಬೇರೆ ರಾಜ್ಯದಲ್ಲಿ ಶೋಧಕಾರ್ಯ ನಡೆಯುತ್ತಿದೆ. ಆರ್‌ಬಿಐ ನಿಯಮಾವಳಿ, ಷರತ್ತುಗಳನ್ನು ಏಜೆನ್ಸಿಯವರು ಪಾಲನೆ ಮಾಡಿಲ್ಲ. ಅವರದ್ದು ಹಲವು ಲೋಪದೋಷಗಳು ಇವೆ.

- ಸೀಮಂತ್‌ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net