ಅಮೆರಿಕದಲ್ಲಿ ಅಕ್ಟೋಬರ್‌ನಲ್ಲಿ ರೋಡ್‌ಶೋ: ಎಂ.ಬಿ. ಪಾಟೀಲ ಹೂಡಿಕೆ ಆಕರ್ಷಣೆಗೆ ಕಾನ್ಸುಲೇಟ್ ಜನರಲ್ ಕಚೇರಿಯಿಂದ ಅಗತ್ಯ ನೆರವು

mb patil
mb patil
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದ ಕಾನ್ಸುಲೇಟ್ ಜನರಲ್ ಮರಿಯಾನ ಎಲ್. ನೀಸ್ಲರ್ ಅವರೊಂದಿಗೆ ಸಚಿವರು
  • ಏಪ್ರಿಲ್‌ನಲ್ಲಿ ರಾಜ್ಯದಲ್ಲಿ ಆಯೋಜಿಸಲು ಉದ್ದೇಶಿಸಿರುವ ಜಾಗತಿಕ ಹೂಡಿಕೆದಾರರ ಸಮಾವೇಶ
ಬೆಂಗಳೂರು:
ರಾಜ್ಯಕ್ಕೆ ಹೆಚ್ಚಿನ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ ಅಕ್ಟೋಬರ್‌ನಲ್ಲಿ ಅಮೆರಿಕದಲ್ಲಿ ರೋಡ್‌ಶೋ ನಡೆಸಲಾಗುವುದು. ಇದಕ್ಕೆ ಅಮೆರಿಕದ ಕಾನ್ಸುಲೇಟ್ ಜನರಲ್ ಕಚೇರಿ ಅಗತ್ಯ ನೆರವು ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ತಮ್ಮನ್ನು ಭೇಟಿಯಾದ ಅಮೆರಿಕದ ಕಾನ್ಸುಲೇಟ್ ಜನರಲ್ ಮರಿಯಾನ ಎಲ್. ನೀಸ್ಲರ್ ಅವರೊಂದಿಗೆ ಸಚಿವರು ಹೂಡಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿ, ಏಪ್ರಿಲ್‌ನಲ್ಲಿ ರಾಜ್ಯದಲ್ಲಿ ಆಯೋಜಿಸಲು ಉದ್ದೇಶಿಸಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಅಮೆರಿಕವನ್ನೂ ಆಹ್ವಾನಿಸಲಾಗುವುದು ಎಂದರು.
ಕರ್ನಾಟಕ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕದ ಕಾನ್ಸುಲೇಟ್ ಜನರಲ್ ಕಚೇರಿಯೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸಲು ಅಗತ್ಯವಾದ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದರು. ಈ ವ್ಯವಸ್ಥೆಯು ಅಮೆರಿಕದ ವಾಣಿಜ್ಯ ಇಲಾಖೆ, ಅಮೆರಿಕನ್ ಚೇಂಬರ್ ಆ್ ಕಾಮರ್ಸ್ (ಅಮ್ಚಮ್) ಹಾಗೂ ಅಮೆರಿಕ ಭಾರತ ವಾಣಿಜ್ಯ ಸಮಿತಿ ಸೇರಿದಂತೆ ಪ್ರಮುಖ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಿದೆ. ಈ ಕಾರ್ಯವು ಇನ್ವೆಸ್ಟ್ ಕರ್ನಾಟಕದ ಮೂಲಕ ನಡೆಯಲಿದೆ ಎಂದರು.
700 ಅಮೆರಿಕನ್ ಕಂಪನಿಗಳು:
ಕರ್ನಾಟಕದಲ್ಲಿ ಈಗಾಗಲೇ ಅಮೆರಿಕದ ಸುಮಾರು 700 ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿವೆ. ಕರ್ನಾಟಕದ ಪ್ರತಿಭೆ, ತಂತ್ರಜ್ಞಾನ, ನಾವೀನ್ಯತೆ ಹಾಗೂ ಉತ್ಪಾದನಾ ಪರಿಸರದ ಮೇಲಿನ ಅಮೆರಿಕದ ವಿಶ್ವಾಸಕ್ಕೆ ಇದು ಸಾಕ್ಷಿಯಾಗಿದೆ. ಇದರ ಭಾಗವಾಗಿ ಅಮೆರಿಕದ ಕಾನ್ಸುಲೇಟ್ ಕಚೇರಿ 2025ರ ಜನವರಿಯಿಂದ ಬೆಂಗಳೂರಿನಲ್ಲೂ ಕಾರ್ಯನಿರ್ವಹಿಸುತ್ತಿದೆ ಎಂದರು.
ಹಲವು ಕ್ಷೇತ್ರಗಳಲ್ಲಿ ಸಹಕಾರ:
ಕರ್ನಾಟಕವು ಅಮೆರಿಕದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ, ಸೆಮಿಕಂಡಕ್ಟರ್ ಸಾಧನಗಳು, ಏರೋಸ್ಪೇಸ್, ರಕ್ಷಣೆ, ಆರೋಗ್ಯ ಸೇವೆ, ಶುದ್ಧ ಇಂಧನ ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಎಇಇ) ಕ್ಷೇತ್ರಗಳಲ್ಲಿ ಈಗಾಗಲೇ ಸಹಕಾರ ಹೊಂದಿದೆ. ಬೆಂಗಳೂರು ದೇಶದ ತಂತ್ರಜ್ಞಾನ ರಾಜಧಾನಿಯಾಗಿದ್ದು, ಮುಂದಿನ ದಿನಗಳಲ್ಲಿ ನವೋದ್ಯಮಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಉತ್ಪಾದನಾ ವಲಯಗಳಲ್ಲಿ ಕರ್ನಾಟಕ ಅಮೆರಿಕ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಹೆಚ್ಚಿನ ಅವಕಾಶಗಳಿವೆ ಎಂದರು.
ಇದರ ಜತೆಗೆ ಇಎಸ್‌ಡಿಎಂ, ಚಿಪ್ ವಿನ್ಯಾಸ, ಮೆಡ್‌ಟೆಕ್ ಹಾಗೂ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಕ್ಷೇತ್ರಗಳಲ್ಲೂ ಹೊಸ ಹೂಡಿಕೆಗಳಿಗೆ ಅವಕಾಶವಿದೆ ಎಂದು ಎಂ.ಬಿ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಕೈಗಾರಿಕಾ ಆಯುಕ್ತೆ ಖುಷ್ಬು ಗೋಯಲ್ ಉಪಸ್ಥಿತರಿದ್ದರು.

*ಬೆಂಗಳೂರು ದೇಶದ ತಂತ್ರಜ್ಞಾನ ರಾಜಧಾನಿಯಾಗಿದ್ದು, ಮುಂದಿನ ದಿನಗಳಲ್ಲಿ ನವೋದ್ಯಮಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಉತ್ಪಾದನಾ ವಲಯಗಳಲ್ಲಿ ಕರ್ನಾಟಕ ಅಮೆರಿಕ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಹೆಚ್ಚಿನ ಅವಕಾಶಗಳಿವೆ

-ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net