ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ

ಚಿಟಗುಪ್ಪ ತಾಲೂಕಿನ ಮುತ್ತಂಗಿ-&ಮುಸ್ತರಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ನೆನಗುದಿಗೆ ಬಿದ್ದಿರುವುದು.
ಚಿಟಗುಪ್ಪ ತಾಲೂಕಿನ ಮುತ್ತಂಗಿ-&ಮುಸ್ತರಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ನೆನಗುದಿಗೆ ಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮುತ್ತಂಗಿ-ಮುಸ್ತರಿ ಸಂಪರ್ಕ ರೋಡ್​
  • ಸಾರ್ವಜನಿಕರ ಆಕ್ರೋಶ
ಚಿಟಗುಪ್ಪ:  ಮುಸ್ತರಿ-ಮುತ್ತಂಗಿ ಗ್ರಾಮ ಸಂಪರ್ಕಿಸುವ ಸುಮಾರು 6 ಕಿಮೀ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿ ಕಳೆದ ಐದಾರು ತಿಂಗಳಿಂದ ಅರ್ಧಕ್ಕೆ ನಿಂತಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.
ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್​ ಯೋಜನೆ (ಪಿಎಂಜಿಎಸ್​ವೈ)ಯಡಿ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿಯಲ್ಲಿ ಗುತ್ತಿಗೆದಾರರು ಕೇವಲ ಮೆಟಲಿಂಗ್​ ಹಾಕಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ.
ಇದುವರೆಗೆ ಡಾಂಬರೀಕರಣ ಮಾಡದ ಕಾರಣ ರಸ್ತೆಯುದ್ದಕ್ಕೂ ಹರಡಿರುವ ಮೆಟಲ್​ ಮೇಲೆ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲಲ್ಲಿ ಮೆಟಲಿಂಗ್​ ಸಡಿಲಗೊಂಡಿದ್ದು, ಇದರಿಂದ ದ್ವಿಚಕ್ರ ವಾಹನ ಸವಾರರು ಅಪಘಾತದ ಭೀತಿಯಲ್ಲಿ ಸಂಚರಿಸುತ್ತಿದ್ದು, ಧೂಳು, ಗುಂಡಿಗಳು ಹಾಗೂ ಒರಟಾದ ರಸ್ತೆಯಿಂದ ಪ್ರಯಾಣ ದುಸ್ತರವಾಗಿದೆ. ಕಾಮಗಾರಿ ವಿಳಂಬವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. 
ಕಾಮಗಾರಿ ಉದ್ದೇಶಪೂರ್ವಕ ವಿಳಂಬಗೊಳಿಸಲಾಗುತ್ತಿದೆಯೇ? ಕಳಪೆ ಗುಣಮಟ್ಟದಲ್ಲಿ ಪೂರ್ಣಗೊಳಿಸುವ ಪ್ರಯತ್ನ ನಡೆಯುತ್ತಿದೆಯೇ? ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ. ಆರೇಳು ತಿಂಗಳಿನಿಂದ ಇದೇ ಪರಿಸ್ಥಿತಿ ಮುಂದುವರಿದಿದ್ದರೂ ಅಧಿಕಾರಿಗಳಿಂದ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 
ತಕ್ಷಣ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಸಂಬಂಧಿತ ಅಧಿಕಾರಿಗಳು ಮಧ್ಯಪ್ರವೇಶಿಸಿ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
"

ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್​ ನೀಡಿ ಸೂಚಿಸಲಾಗಿದೆ. ಯುದ್ಧ ಪರಿಸ್ಥಿತಿಯಿಂದ ಡಾಂಬರದ ಕೊರತೆ ಉಂಟಾಗಿದೆ. ಡಾಂಬರ ಲಭ್ಯವಾದ ತಕ್ಷಣ ಕಾಮಗಾರಿ ಆರಂಭಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಆದರೂ ಸಹ ಆದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಲಾಗುವುದು.

— > ಸುಭಾಷ ವಾಘಮಾರೆ, ಎಇಇ, ಪಿಎಂಜಿಎಸ್​ವೈ
"

ಮುತ್ತಂಗಿ-ಮುಸ್ತರಿ ರಸ್ತೆಯಲ್ಲಿ ಕೇವಲ ಮೆಟಲಿಂಗ್​ ಹಾಕಿ ಸುಮಾರು ಏಳು ತಿಂಗಳಾದರೂ ಡಾಂಬರೀಕರಣ ಮಾಡದಿರುವುದು ಜನರಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವಾರದೊಳಗೆ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಗ್ರಾಮಸ್ಥರೊಂದಿಗೆ ಹೋರಾಟ ನಡೆಸಬೇಕಾಗುತ್ತದೆ.

— >ಶಿವಪುತ್ರ ಸಾದಾ, ಮುತ್ತಂಗಿ ಗ್ರಾಮಸ್ಥ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net