

ವಿಜಯಪುರ :
ಪಟ್ಟಣದ ಬೈಪಾಸ್ ರಸ್ತೆಯಲ್ಲಿ ನಿರಂತರವಾಗಿ ಏಳುತ್ತಿದ್ದ ಧೂಳು, ಹಳ್ಳ-ಕೊಳ್ಳಗಳು ಹಾಗೂ ವಾಹನಗಳ ತೀವ್ರ ಸಂಚಾರ ಒತ್ತಡದಿಂದ ಸಾರ್ವಜನಿಕರು ಅನುಭವಿಸುತ್ತಿದ್ದ ನರಕದರ್ಶನಕ್ಕೆ ಕೊನೆಗೂ ತೆರೆ ಬೀಳುವ ಸೂಚನೆ ಸಿಕ್ಕಿದೆ.
ಚಿಕ್ಕಬಳ್ಳಾಪುರ ರಸ್ತೆಯ ಪ್ರಗತಿ ಪ್ರಥಮ ದರ್ಜೆ ಕಾಲೇಜಿನಿಂದ ಟೌನ್ ಹಾಲ್ನ ಅಂಗತಟ್ಟಿ ನಂಜುಂಡಪ್ಪ ವೃತ್ತದವರೆಗೆ ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಹೀಗಾಗಿ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಶಿಡ್ಲಘಟ್ಟ-&ಬೆಂಗಳೂರು ಕಡೆಗೆ ಸಾಗುವ ಸಾವಿರಾರು ವಾಹನಗಳು ಪ್ರಗತಿ ಕಾಲೇಜಿನಿಂದ ವಿಜಯ ವೀರಾಂಜನೇಯ ಸ್ವಾಮಿ ದೇವಾಲಯ ಹಾಗೂ ಬಸವೇಶ್ವರ ಬಸ್ ನಿಲ್ದಾಣ ಮಾರ್ಗದ ಬೈಪಾಸ್ ರಸ್ತೆಯಲ್ಲೇ ಸಂಚರಿಸುತ್ತಿದ್ದುದರಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು.
ಈ ಕುರಿತು ವಿಜಯವಾಣಿ ಸೋಮವಾರ "ವಿಜಯಪುರದಲ್ಲಿ ಧೂಳ್ ಮಗಾ ಧೂಳು!' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಬೆನ್ನಲ್ಲೇ ಸ್ಪಂದಿಸಿದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ವಿಜಯವಾಣಿ ಪತ್ರಿಕೆಯಲ್ಲಿ ಸಾರ್ವಜನಿಕರ ಗೋಳಿನ ಬಗ್ಗೆ ವರದಿ ಪ್ರಕಟವಾದ ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವ ಮುನಿಯಪ್ಪ ಹಾಗೂ ಅಧಿಕಾರಿಗಳು ಕಾಮಗಾರಿ ಆಂರಂಭಕ್ಕೆ ಸೂಚನೆ ನೀಡಿದ್ದಾರೆ. ಸಾರ್ವಜನಿಕ ಧ್ವನಿಯಾದ ಪತ್ರಿಕೆಗೆ ಧನ್ಯವಾದ.
— > ಸಿ.ಭಾಸ್ಕರ್ ಮಾಲೀಕರು, ಭಾರತಿ ಕ್ಲಾತ್ ಸೆಂಟರ್
ಈ ರಸ್ತೆಯಲ್ಲಿ ಹಲವಾರು ಶಾಲೆ-&ಕಾಲೇಜುಗಳು, ಆಸ್ಪತ್ರೆಗಳಿದ್ದು, ಸಾವಿರಾರು ವಿದ್ಯಾರ್ಥಿಗಳು, ವೃದ್ಧರು ಹಾಗೂ ರೋಗಿಗಳು ಸಂಚರಿಸುತ್ತಾರೆ. ಹಾಗಾಗಿ ರಸ್ತೆಯ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗ ನಿರ್ಮಿಸಬೇಕು.
— > ಭರತ್ ಮಾಲೀಕ, ಕಾಫಿ ಕೌಂಟರ್