ಆಟದಿಂದ ದೂರ ಇರುವ ಮಕ್ಕಳಲ್ಲಿ ಹೃದಯಾಘಾತದ ರಿಸ್ಕ್! ಕೆಎಂಸಿಆರ್​ಐ ಸಂಶೋಧನಾ ವರದಿಯಿಂದ ಆತಂಕಕಾರಿ ಅಂಶ ಬಯಲು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ರಕ್ತನಾಳದ ಒಳಪದರಕ್ಕೆ ಧಕ್ಕೆ
  • ಕೆಎಂಸಿಆರ್​ಐ ಸಂಶೋಧನಾ ವರದಿಯಿಂದ ಆತಂಕಕಾರಿ ಅಂಶ ಬಯಲು

| ಮರಿದೇವ ಹೂಗಾರ, ಹುಬ್ಬಳ್ಳಿ

ಓದಿನ ಭರದಲ್ಲಿ ಪಠ್ಯೇತರ ಚಟುವಟಿಕೆಗಳಿಂದ ದೂರ ಉಳಿದ ಮಕ್ಕಳಲ್ಲಿ ಹೃದ್ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಆತಂಕಕಾರಿ ಅಂಶ ಅಧ್ಯಯನದಿಂದ ದೃಢಪಟ್ಟಿದೆ. ಹುಬ್ಬಳ್ಳಿಯ ಕೆಎಂಸಿಆರ್​ಐನ ಬಹುವಿಭಾಗೀಯ ಸಂಶೋಧನಾ (ಎಂಆರ್​ಯುು) ಘಟಕ ಹಾಗೂ ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ ಜಂಟಿಯಾಗಿ ಕೈಗೊಂಡ ಅಧ್ಯಯನವು ಅನೇಕ ಅಘಾತಕಾರಿ ಅಂಶಗಳನ್ನು ಹೊರಹಾಕಿದೆ.

ದೇಶದಲ್ಲಿ ಮೊದಲ ಬಾರಿಗೆ ಮಕ್ಕಳು ಮತ್ತು ಯುವಕರ ಮೇಲೆ ಹೃದಯಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲಾಗಿದೆ. ಕರ್ನಾಟಕದ 25 ಜಿಲ್ಲೆಗಳು, ದೇಶದ 13 ರಾಜ್ಯಗಳಲ್ಲಿನ 6 ರಿಂದ 18ರ ಪ್ರಾಯದ 347 ಲಕ್ಷಣರಹಿತ (ನಾನ್ ಸಿಂಪ್ಟಮ್ಸ್​) ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದವರು ಇದ್ದಾರೆ. ಇವರೆಲ್ಲರ ಹೃದಯದ ರಕ್ತನಾಳದ ಆರೋಗ್ಯ ತಪಾಸಣೆ ಮಾಡಲಾಗಿದೆ. ಚಯಾಪಚಯ ವೈಪರೀತ್ಯ ಮತ್ತು ರಕ್ತನಾಳಗಳ ಒಳಪದರ ಹಾನಿಯ ಆರಂಭಿಕ ಲಕ್ಷಣಗಳು ಕಂಡುಬಂದಿವೆ. ಇವೆಲ್ಲ ಹೃದಯಾಘಾತಕ್ಕೆ ಕಾರಣವಾಗುವ ಪ್ರಕ್ರಿಯೆಗಳಾಗಿವೆ ಎಂಬುದು ತಜ್ಞರ ಅಭಿಮತ. ಪರೀಕ್ಷೆಗೆ ಒಳಪಡಿಸಿದವರಲ್ಲಿ ಶೇ. 70 ಮಕ್ಕಳ ಹೃದಯದ ಸಮಸ್ಯೆಗೆ ತುತ್ತಾಗುವ ಸಂಭವವಿರುವುದು ಬಯಲಾಗಿದೆ.

ಬದಲಾದ ಜೀವನ ಶೈಲಿ, ಆಟೋಟಗಳಿಂದ ದೂರ ಉಳಿದಿದ್ದರಿಂದ ಬೊಜ್ಜು ಕಾಣಿಸಿ ಕೊಳ್ಳುತ್ತದೆ. ಆಲ್ಕೋಹಾಲ್, ಧೂಮಪಾನ, ತಂಬಾಕು, ಜಂಕ್​ಫುಡ್ ಸೇವನೆ ಮಾಡಿದ್ದರೂ ಎಂಡೋಥೀಲಿಯಂ ಅಸಾಮಾನ್ಯ ಕ್ರಿಯೆ ತೋರಿಸಿವೆ. ಹೈಪಹೋಮೋಸಿಸ್ಟೀನೆಮಿಯಾ ಹೆಚ್ಚಿಗೆ ಹರಡಿದೆ. ಹೈ-ಸೆನ್ಸಿಟಿವಿಟಿ, ಸಿ-ರಿಯಾಕ್ಟಿವ್ ಪ್ರೊಟಿನ್ (ಎಚ್​ಎಸ್-ಸಿಆರ್​ಪಿ) ಹದಿಹರೆಯ ದವರಲ್ಲಿ ಶೇ. 28.24 ಇದ್ದು, ಇದು ಹೃದಯಾಘಾತದ ಆರಂಭಿಕ ಹಂತ ಎನ್ನುತ್ತಾರೆ ಎಂಆರ್​ಯುು ವಿಜ್ಞಾನಿಗಳಾದ ಡಾ. ಶಿವಕುಮಾರ ಬೇಲೂರ ಮತ್ತು ಡಾ. ಅರುಣ ಶೆಟ್ಟರ್.

ವರದಿ ಸಲ್ಲಿಸಲು ಸಿದ್ಧತೆ

ವರದಿಯನ್ನು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಭವಿಷ್ಯದ ಅಪಾಯವನ್ನು ಅರಿತಿರುವ ತಂಡವು ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಲು, ಆರೋಗ್ಯಯುತ ಜೀವನ ಶೈಲಿ ಮತ್ತು ಪಠ್ಯಗಳಲ್ಲಿ ಉನ್ನತ ಹಂತದ ದೈಹಿಕ ಶಿಕ್ಷಣದ ಅಳವಡಿಸಲು ವರದಿಯಲ್ಲಿ ಪ್ರಸ್ತಾಪಿಸಿದೆ.

ಪಠ್ಯೇತರ ಚಟುವಟಿಕೆಯಿಂದ ದೂರ ಉಳಿದ ಮಕ್ಕಳಲ್ಲಿ ಹೃದಯಾಘಾತದ ರಿಸ್ಕ್ ಹೆಚ್ಚಾಗಿದೆ. ಈ ಬಗ್ಗೆ ಮೊದಲು ಕೆಎಂಸಿಆರ್​ಐನ ಎಂಆರ್​ಯುುನಲ್ಲಿ ಸಂಶೋಧನೆ ಮಾಡಲಾಗಿತ್ತು. ಈಗ ದೇಶದ 13 ರಾಜ್ಯಗಳಲ್ಲಿಯೂ ಕೈಗೊಳ್ಳಲಾಗಿದೆ. ನಮ್ಮ ಅಧ್ಯಯನದ ವರದಿಯ ಅಂಶಗಳೇ ಬಹಳಷ್ಟು ಇಲ್ಲಿಯೂ ಉಲ್ಲೇಖವಾಗಿದ್ದು ಗಮನಾರ್ಹ.

| ಡಾ. ರಾಮ್ ಕೌಲಗುಡ್ ಎಂಆರ್​ಯುು ನೋಡಲ್ ಅಧಿಕಾರಿ

ಹದಿಹರೆಯದವರ ಮೇಲೆ ಪ್ರಥಮ ಬಾರಿಗೆ ಸಂಶೋಧನೆ ಮಾಡಲಾಗಿದೆ. ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದ ಅಪಾಯ ಎದುರಿಸುವಂತಾಗಿರುವುದು ಆತಂಕ ತರಿಸಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗಲ್ಲ ಚಟುವಟಿಕೆಗೆ ಆದ್ಯತೆ ಕೊಡುವ ಅಗತ್ಯವಿದೆ. ಈ ವಿಷಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನಕ್ಕೂ ತರಲಾಗುವುದು.

| ಡಾ. ಉದಯ ಬಾಂದೆ, ಕೆಎಂಸಿಆರ್​ಐ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net