ರಾಯಚೂರು ತುಂಗಭದ್ರಾ ನೀರಾವರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರ ಶಾಶ್ವತ ಉದ್ಯೋಗ ಭದ್ರತೆಗೆ ಒತ್ತಾಯಿಸಿ ಮಾ.7 ರಂದು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಕ್ಕೊತ್ತಾಯ ಸಮಾವೇಶವನ್ನು ಮಾಜಿ ಕಾರ್ಮಿಕ ಸಚಿವ ಎಸ್.ಕೆ.ಕಾಂತ ಉದ್ಘಾಟಿಸಲಿದ್ದು, ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಪ್ಪನ್ ಡಿ.ರಿಜೋರಿಯಾ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ತುಂಗಭದ್ರಾ ನೀರಾವರಿ ಯೋಜನೆಯು ರಾಜ್ಯದ ಇತರೆ ನೀರಾವರಿ ಯೋಜನೆಗಳಿಗಿಂತ ಬಹುದೊಡ್ಡ ನೀರಾವರಿ ಅಚ್ಚುಕಟ್ಟು ಪ್ರದೇಶವನ್ನೊಳಗೊಂಡಿದ್ದು, ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿಯಾಗಿದೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಡಬೇಕೆಂಬ ಆದೇಶವಿದ್ದರೂ ನಿಗಮದ ಅಧಿಕಾರಿಗಳು ತುಂಗಭದ್ರಾ ನೀರಾವರಿ ವ್ಯಾಪ್ತಿಯ ಕಾಲುವೆಗಳಲ್ಲಿ ನೀರಿಲ್ಲದ ಕಾರಣ ಕೆಲಸ ನೀಡುತ್ತಿಲ್ಲ. ಇದರಿಂದ ಕಾರ್ಮಿಕರು ಜೀವನ ನಡೆಸುವುದು ಕಷ್ಟವಾಗಿದೆ ಎಂದರು.
ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ತುಂಗಭದ್ರಾ ನಿರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಖಾಯಂ ಗೊಳಿಸಬೇಕು. ತುಂಗಭದ್ರಾ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಕೆಲಸ ಮಾಡುವ ನೀರಾವರಿ ಕಾರ್ಮಿಕರಿಗೆ ಬದುಕುವ ವೇತನ, ಇಪಿಎಫ್ ಮತ್ತು ಇಎಸ್‌ಐ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಪಾವತಿಸಬೇಕು. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಕಾರ್ಮಿಕರಿಗೆ ಕೆಲಸದ ಪರಿಕರಗಳು, ಗುರುತಿನ ಚೀಟಿ, ಸಮವಸ್ತ್ರ ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡಬೇಕು. ನೀರಾವರಿ ಕಾರ್ಮಿಕರ ಬಾಕಿ ವೇತನವನ್ನು ಕೂಡಲೇ ಪಾವತಿಸಬೇಕು ಸೇರಿದಂತೆ ಅನೇಕ ಒತ್ತಾಯಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಸವರಾಜ, ಎಐಸಿಸಿಟಿಯು ಜಿಲ್ಲಾಧ್ಯಕ್ಷ ಅಜೀಜ್ ಜಾಗೀರದಾರ, ಪ್ರಮುಖರಾದ ಬಸನಗೌಡ, ಲಕ್ಷ್ಮಣ, ನಿಸಾರ, ರಾಮರೆಡ್ಡಿ, ಜಗದೀಶ, ಭೀಮಣ್ಣ ಇದ್ದರು.