ಒತ್ತುವರಿಯಾಗಿ ಮುಚ್ಚುವ ಹಂತದಲ್ಲಿದ್ದ ಕೆರೆಗೆ ಕಾಯಕಲ್ಪ...!

ಬಸವೇಶ್ವರ ಬಡಾವಣೆಯ ನಮ್ಮ ಕೆರೆ
ಬಸವೇಶ್ವರ ಬಡಾವಣೆಯ ನಮ್ಮ ಕೆರೆ
Published on
ಮಂಜುನಾಥ ಎಸ್​. ಅಂಗಡಿ ಧಾರವಾಡ
ಕೆರೆಗಳಲ್ಲಿ ಜಲ ಕಳೆ ಬೆಳೆದಿರುವುದು, ನಿರ್ವಹಣೆ& ಅಭಿವೃದ್ಧಿ ಇಲ್ಲದಿವುದು, ಒತ್ತುವರಿಯಾಗಿರುವುದು, ಚರಂಡಿ ನೀರು ನುಗ್ಗುವುದು... ಇಂಥ ಅನೇಕ ಅದ್ವಾನಗಳ ಬಗ್ಗೆ "ವಿಜಯವಾಣಿ' ಪತ್ರಿಕೆ "ಕೆರೆ ಕಹಾನಿ' ಹೆಸರಲ್ಲಿ ಸರಣಿ ವರದಿಗಳನ್ನು ಓದುಗರ ಮುಂದಿಟ್ಟಿದೆ. ಹುಬ್ಬಳ್ಳಿ- ಧಾರವಾಡ ಅವಳನಗರದ ಹೆಸರಾಂತ ಮತ್ತು ಐತಿಹಾಸಿಕ ಕೆರೆಗಳ ದುಸ್ಥಿತಿಯನ್ನು ತೆರೆದಿಟ್ಟಿದೆ. ಈ ಮಧ್ಯೆ ಒತ್ತುವರಿಯಾಗಿ ಮುಚ್ಚಿ ಹೋಗುವ ಸ್ಥಿತಿಯಲ್ಲಿದ್ದ ಕೆರೆಯನ್ನು ನಿವಾಸಿಗಳೇ ಉಳಿಸಿ "ನಮ್ಮ ಕೆರೆ'ಯನ್ನಾಗಿ ರೂಪಿಸಿದ ಯಶೋಗಾಥೆ ಇಲ್ಲಿದೆ.
ಧಾರವಾಡ ಹಾಲು ಒಕ್ಕೂಟದ ಹಿಂಭಾಗದ ಬಸವೇಶ್ವರ ಬಡಾವಣೆಯಲ್ಲಿ ಸರ್ಕಾರಿ ಕೆರೆ ಇತ್ತು. ಕೆಲ ಪ್ರಭಾವಿಗಳಿಂದ ಒತ್ತುವರಿಯಾಗಿ ಶೆಡ್​ಗಳು ನಿರ್ಮಾಣಗೊಂಡಿದ್ದವು. ಹಾಗೇ ಬಿಟ್ಟಿದ್ದರೆ ಅನಧಿಕೃತ ಮನೆಗಳು ತಲೆ ಎತ್ತುತ್ತಿದ್ದವು. ಇದನ್ನು ಅರಿತ ಬಸವೇಶ್ವರ ಬಡಾವಣೆ, ಶಾಕಾಂಬರಿನಗರ, ನಂದಿನಿ ಲೇಔಟ್​, ಸಾಯಿ ಲೇಔಟ್​, ಗುರುದೇವನಗರ ನಿವಾಸಿಗಳು ಕೆರೆಯನ್ನು ಉಳಿಸಲು ಪಣ ತೊಟ್ಟರು. ಒತ್ತುವರಿ ತೆರವಿಗೆ ಶಾಸಕ, ಸಚಿವರು, ಸಂಬಂಧಪಟ್ಟವರಿಗೆ ಮನವಿ ನೀಡಿದ್ದರು. ಕರೊನಾ ಕಾಲದ ಸಂರ್ಪೂಣ ಲಾಕ್​ಡೌನ್​ ನಂತರ ನಿರ್ಬಂಧ ಕೊಂಚ ಸಡಿಲಿಕೆಯಾದ ದಿನಗಳಲ್ಲಿ ಕೆರೆಗೆ ಕಾಯಕಲ್ಪ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ವೇ ನಂ. 132ರ ಸುಮಾರು 1 ಎಕರೆ 5 ಗುಂಟೆ ಸರ್ಕಾರಿ ಕೆರೆಯಲ್ಲಿ ನೀರು ನಿಲ್ಲುವಂತೆ ಹೂಳು ಎತ್ತುವುದು, ಒಡ್ಡು ನಿರ್ಮಾಣ, ಜನ ಕುಳಿತುಕೊಳ್ಳಲು ಬೆಂಚ್​ಗಳ ಅಳವಡಿಕೆ, ಬೀದಿದೀಪ ವ್ಯವಸ್ಥೆ, ಕೆರೆಯ ಸುತ್ತಲಿನ ಬದುವಿನಲ್ಲಿ ನೂರಾರು ನೆರಳಿನ ಗಿಡಗಳನ್ನು ನೆಟ್ಟು ಅಭಿವೃದ್ಧಿ ಪಡಿಸಿದ್ದರು. ಸುತ್ತಲಿನ 5 ಬಡಾವಣೆಗಳ ನಿವಾಸಿಗಳು ಕೈಲಾದಷ್ಟು ಹಣ ನೀಡಿ ಸಂಗ್ರಹವಾದ 3.5 ಲಕ್ಷ ರೂ. ಹಣದಿಂದ ಕೆರೆಗೆ ಹೊಸ ರೂಪ ನೀಡಿದ್ದು ವಿಶೇಷ.
ಮಳೆಗಾಲದಲ್ಲಿ ಕೆರೆ ಭತಿರ್ಯಾಗುತ್ತದೆ. ಆದರೆ, ಮಳೆ ನೀರು ಹೋಗುತ್ತಿದ್ದ ಕೆಲ ನಾಲಾಗಳನ್ನು ಇತ್ತೀಚೆಗೆ ಕೆಲವರು ಬಂದ್​ ಮಾಡಿದ್ದಾರೆ. ಆದಾಗ್ಯೂ ಕೆರೆಯಲ್ಲಿ ನೀರಿದೆ. ನವಲೂರು ಸೇರಿ ಸುತ್ತಲಿನ ಪ್ರದೇಶಗಳ ಜಾನುವಾರುಗಳಿಗೆ ಕುಡಿಯಲು ಮತ್ತು ಮೈ ತೊಳೆಯಲು ನಮ್ಮ ಕೆರೆ ಅನುಕೂಲವಾಗಿದೆ.
ಗಿಡಗಳಿಗೆ ಕೊಡಲಿ ಏಟು
ನಿವಾಸಿಗಳ ಶ್ರಮದಿಂದ ಆದ "ನಮ್ಮ ಕೆರೆ'ಯ ಅಭವೃದ್ಧಿ ಸಹಿಸದ ಕೆಲವರು ಕೆರೆಯ ಬದುವಿನಲ್ಲಿ ನೆಟ್ಟಿದ್ದ ನೂರಾರು ಗಿಡಗಳನ್ನು ಕಡಿದು ಹಾಕಿದ್ದಾರೆ. ಕೆರೆಯ ಒಡಲು ಸೇರುತ್ತಿದ್ದ ಮಳೆ ನೀರಿನ ಮೂಲವನ್ನು ಬಂದ್​ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಬೇಕು ಎಂಬುದು ನಿವಾಸಿಗಳ ಆಗ್ರಹ.
"

ಕೆರೆಯ ಒತ್ತುವರಿಯನ್ನು ವಿನಯ ಕುಲಕಣಿರ್ ಅವರ ಗಮನಕ್ಕೆ ತಂದಾಗ ತೆರವು ಮಾಡಿಸಿದ್ದರು. ನಿವಾಸಿಗಳು ಹಣ ಸಂಗ್ರಹಿಸಿ ಕೈಲಾದಷ್ಟು ಅಭಿವೃದ್ಧಿಪಡಿಸಿದಾಗ ಶಾಸಕ ಅರವಿಂದ ಬೆಲ್ಲದ ಪೂಜೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವಾಕಿಂಗ್​ ಪಾತ್​, ಪೇವರ್ಸ್​ ಅಳವಡಿಕೆ, ಇತರ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಅನುದಾನ ನೀಡುವುದಾಗಿ ಶಾಸಕ ಅರವಿಂದ ಬೆಲ್ಲದ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net