ಗೃಹ ಜ್ಯೋತಿ ಯೋಜನೆ ಪರಿಷ್ಕರಣೆ ಪ್ರಾರಂಭ ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆಗೆ ಅಂತಿಮ ತಾಲೀಮು
DK SHIVAKUMAR
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
-ಕಾಕಾ ಪಾಟೀಲನಿಗೂ ಫ್ರೀ, ಎಲ್ಲರಿಗೂ ಫ್ರೀ ಎಂದಿದ್ದೇಕೆ?
-ಸರ್ಕಾರದ ನಡೆಗೆ ತಿರುಗಿಬಿದ್ದ ಪ್ರತಿಪಕ್ಷಗಳು
ಬೆಂಗಳೂರು:
ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆ ಪರಿಷ್ಕರಣೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ರಾಜ್ಯಾದ್ಯಂತ ಮನೆ-ಮನೆಗೆ ತೆರಳಿ ಫಲಾನುಭವಿಗಳ ಮರುಪರಿಶೀಲನೆ ಆರಂಭಿಸಿದೆ.
ಇನ್ನೊಂದು ವಾರದಲ್ಲಿ ಗೃಹಲಕ್ಷ್ಮಿ ಲಾನುಭವಿ ಪರಾಮರ್ಶೆಯನ್ನು ಕೈಗೆತ್ತಿಕೊಳ್ಳಲು ಸರ್ಕಾರ ಸಿದ್ದತೆಯನ್ನು ಬಹುತೇಕ ಅಂತಿಮಗೊಳಿಸಿದೆ.
ಈ ಎರಡು ಗ್ಯಾರಂಟಿ ಯೋಜನೆಯಲ್ಲಿ ಅನರ್ಹರು, ನಕಲಿ ದಾಖಲೆಗಳು, ಮೃತರ ಹೆಸರಿನ ಖಾತೆಗಳು ಹಾಗೂ ವಾಣಿಜ್ಯ ಬಳಕೆಯ ದುರುಪಯೋಗವನ್ನು ತಡೆಯುವುದು ಇದರ ಉದ್ದೇಶವಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಆದರೆ, ಸರ್ಕಾರದ ಸಮರ್ಥನೆಯನ್ನು ಬಿಜೆಪಿ ಸುತರಾಮ ಒಪ್ಪಿಲ್ಲ. ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ, ಎಲ್ಲರಿಗೂ ಫ್ರೀ ಎಂದು ಗಂಟಲು ಹರಿದುಕೊಳ್ಳುವಂತೆ ಬೊಬ್ಬೆ ಹೊಡೆದಿದ್ದ ಕಾಂಗ್ರೆಸ್ ಈಗ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿರುವ ವಿರೋಧ ಪಕ್ಷಗಳು ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿವೆ.
ಪರಿಶೀಲನೆ ವೇಳೆ ಆಧಾರ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಬಾಡಿಗೆ ಒಪ್ಪಂದ (ಅಗತ್ಯವಿದ್ದರೆ) ಕೇಳುತ್ತಿರುವುದು ಸರಿ. ಆದರೆ, ಪ್ಯಾನ್ ಹಾಗೂ ಮತದಾರರ ಜಾತಿ ಪ್ರಮಾಣ ಪತ್ರವನ್ನು ಕೇಳುತ್ತಿರುವುದು ಯಾಕೆ ಎಂದು ಬಿಜೆಪಿ ಪ್ರಶ್ನಿಸಿದೆ.
ಗೃಹಲಕ್ಷ್ಮಿಪರಾಮರ್ಶೆ:
ಗೃಹಲಕ್ಷ್ಮಿ ಯೋಜನೆಯನ್ನೂ ಮರುಪರಿಶೀಲನೆಗೆ ಒಳಪಡಿಸಲಾಗುತ್ತಿದ್ದು, ನಿಜವಾದ ಫಲಾನುಭವಿಗಳಿಗೆ ಮಾತ್ರ ಯೋಜನೆ ಮುಂದುವರಿಸುವ ಉದ್ದೇಶ ಸರ್ಕಾರದ್ದಾಗಿದೆ.
ಸಿಎಜಿ ವರದಿಯಲ್ಲಿ ಉಲ್ಲೇಖವಾದ ಅಕ್ರಮಗಳ ಹಿನ್ನೆಲೆಯಲ್ಲಿ ಫಲಾನುಭವಿಗಳ ವಿವರಗಳನ್ನು ಮರು ದೃಢೀಕರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರದ ಸ್ಪಷ್ಟನೆ:
ಯಾವುದೇ ಕಾರಣಕ್ಕೂ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುವುದಿಲ್ಲ. ಅರ್ಹ ಫಲಾನುಭವಿಗಳಿಗೆ ಯೋಜನೆಗಳು ಮುಂದುವರಿಯಲಿದ್ದು, ಮರುಪರಿಶೀಲನೆ ಕೇವಲ ಅನರ್ಹರನ್ನು ಹೊರಗಿಡಲು ಮಾತ್ರ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
--
ಪ್ಯಾನ್ ಕಾರ್ಡ್, ಜಾತಿ ಪ್ರಮಾಣ ಪತ್ರ
ಕೇಳುತ್ತಿರುವುದು ಯಾಕೆ; ಅಶೋಕ್
ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ವೇಳೆ ಪ್ಯಾನ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ ಕೇಳುತ್ತಿರುವುದು ಯಾವ ಉದ್ದೇಶಕ್ಕಾಗಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಷರತ್ತಿಲ್ಲದೆ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಈಗ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮನೆ-ಮನೆ ಪರಿಶೀಲನೆ ನಡೆಸುತ್ತಿದೆ ಎಂದು ಆರೋಪಿಸಿದೆ.
ಮರುಪರಿಶೀಲನೆ ವೇಳೆ ಎಸ್ಕಾಂ ಸಿಬ್ಬಂದಿ ಪ್ಯಾನ್ ಕಾಡ್ ಹಾಗೂ ಜಾತಿ ಪ್ರಮಾಣ ಪತ್ರ ಕೇಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಫಲಾನುಭವಿಗಳು ರಾಜ್ಯದ ನಿವಾಸಿಗಳೇ ಎಂಬುದನ್ನು ಪರಿಶೀಲಿಸಲು ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಸಾಕಾಗುತ್ತದೆ. ಆದರೆ ಜಾತಿ ಮತ್ತು ಆದಾಯದ ಮಾಹಿತಿ ಕೇಳುವ ಅಗತ್ಯವೇನು ಎಂದು ಪ್ರಶ್ನಿಸಿದೆ.
ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲು ಸರ್ಕಾರಕ್ಕೆ ಹಣದ ಕೊರತೆ ಎದುರಾಗಿದ್ದು, ಅದನ್ನು ಮುಚ್ಚಿಹಾಕಲು ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟೀಕಿಸಿದ್ದಾರೆ.
--
ಗೃಹಲಕ್ಷ್ಮಿ ಹಣದ ಸಿಎಜಿ ವರದಿ ಕುರಿತು
ವಿಶೇಷ ತನಿಖೆಗೆ ಸಿ.ಟಿ. ರವಿ ಆಗ್ರಹ
ಗೃಹಲಕ್ಷ್ಮಿ ಯೋಜನೆಯ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಸಿಎಜಿ ವರದಿಯಲ್ಲಿ ನಕಲಿ ಖಾತೆಗಳಿಗೆ ಹಣ ಜಮೆಯಾಗಿರುವುದು, ಒಂದೇ ಖಾತೆಗೆ ಹಲವು ಬಾರಿ ಹಣ ವರ್ಗಾವಣೆ ಆಗಿರುವುದು ಹಾಗೂ ಮೃತರ ಹೆಸರಿನ ಖಾತೆಗಳಿಗೂ ಹಣ ಸಂದಾಯವಾಗಿರುವ ಕುರಿತು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಎಫ್‌ಐಆರ್ ದಾಖಲಿಸಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಸುಮಾರು ₹5 ಸಾವಿರ ಕೋಟಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎಂಬ ವಿಚಾರ ವಿಧಾನಮಂಡಲದಲ್ಲೂ ಚರ್ಚೆಯಾಗಿತ್ತು. ಆ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಸರ್ಕಾರ ತನಿಖೆ ನಡೆಸದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಬಡವರ ಹೆಸರಿನಲ್ಲಿ ನಡೆದಿರುವ ಈ ಅಕ್ರಮದ ಕುರಿತು ಸರ್ಕಾರ ಕೂಡಲೇ ಪ್ರಕರಣ ದಾಖಲಿಸಿ, ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಅವರು, ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳಿಗೆ ಈಗ ಹೊಸ ಷರತ್ತುಗಳನ್ನು ವಿಧಿಸುತ್ತಿರುವುದು ಸರ್ಕಾರದ ಆರ್ಥಿಕ ಸಂಕಷ್ಟವನ್ನು ತೋರಿಸುತ್ತದೆ ಎಂದು ಟೀಕಿಸಿದರು.
*ಯಾವುದೇ ಕಾರಣಕ್ಕೂ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುವುದಿಲ್ಲ. ಅರ್ಹ ಫಲಾನುಭವಿಗಳಿಗೆ ಯೋಜನೆಗಳು ಮುಂದುವರಿಯಲಿದ್ದು, ಮರುಪರಿಶೀಲನೆ ಕೇವಲ ಅನರ್ಹರನ್ನು ಹೊರಗಿಡಲು ಮಾತ್ರ.