ಅಂಗವಿಕಲರ ಸಮಸ್ಯೆ ನಿವಾರಣೆಗೆ ಸ್ಪಂದಿಸಿ

ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ಡಾ. ಆನಂದ ಕೆ. ಮಾತನಾಡಿದರು. ಬಿ.ಎ. ಸೌದಾಗರ ಇದ್ದಾರೆ.
ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ಡಾ. ಆನಂದ ಕೆ. ಮಾತನಾಡಿದರು. ಬಿ.ಎ. ಸೌದಾಗರ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ. ಆನಂದ ಕೆ. ಸೂಚನೆ
  • ಕುಂದು ಕೊರತೆ ಸಭೆ ಆಯೋಜನೆ
ವಿಜಯಪುರ: ಜಿಲ್ಲೆಯ ಎಲ್ಲ ತಾಲೂಕುಮಟ್ಟದಲ್ಲಿ ಅಂಗವಿಕಲರ ಕುಂದುಕೊರತೆ ಸಭೆ ನಡೆಸಿ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕೆಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಂಗವಿಕಲರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗವಿಕಲರ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಕಚೇರಿ, ಆಸ್ಪತ್ರೆ, ಬ್ಯಾಂಕ್ ಎಟಿಎಂಗಳಲ್ಲಿ ರ‍್ಯಾಂಪ್ ಮತ್ತು ರೇಲಿಂಗ್ಸ್ ಅಳವಡಿಸಬೇಕು. ಬೆನ್ನುಹುರಿ ಅಪಘಾತಕ್ಕೆ ಒಳಗಾದ ಅಂಗವಿಕಲರಿಗೆ ಕಡ್ಡಾಯವಾಗಿ ಮೆಡಿಕಲ್ ಕಿಟ್ ವಿತರಿಸಬೇಕಲ್ಲದೆ, ವಿತರಣೆ ಮಾಡಿದ ಮಾಹಿತಿಯನ್ನು 5 ದಿನದೊಳಗಾಗಿ ಸಲ್ಲಿಸಬೇಕೆಂದು ತಾಕೀತು ಮಾಡಿದರು.
ಸರ್ಕಾರ ಅಂಗವಿಕಲರ ಏಳಿಗೆಗೆ ಜಾರಿಗೊಳಿಸಿರುವ ಯೋಜನೆಗಳನ್ನು ಅರ್ಹರಿಗೆ ದೊರಕಿಸಲು ಶ್ರಮಿಸಬೇಕು. ಅರ್ಹರು ಸಹ ಯೋಜನೆಗಳ ಮಾಹಿತಿ ಪಡೆಯಬೇಕು. ಅಂಗವಿಕಲರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅವರಿಗೆ ಮೀಸಲಿಟ್ಟ ಶೇ.5 ರಷ್ಟು ಅನುದಾನವನ್ನು ಸರ್ಕಾರದ ಮಾರ್ಗಸೂಚಿಯಂತೆ ಸಮರ್ಪಕವಾಗಿ ಸದ್ಬಳಕೆ ಆಗುವಂತೆ ಕ್ರಮ ವಹಿಸುವ ಮೂಲಕ ಅಂಗವಿಕಲರ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ ನೀಡಬೇಕು. ಗ್ರಾಪಂ, ಸ್ಥಳೀಯ ಸಂಸ್ಥೆಗಳು ಹಾಗೂ ಪಾಲಿಕೆ ಅನುದಾನದ ಕುರಿತ ಸಮಗ್ರ ಮಾಹಿತಿಯನ್ನು 15 ದಿನಗಳೊಳಗಾಗಿ ನೀಡಬೇಕೆಂದು ತಿಳಿಸಿದರು.
2016ರ ಕಾಯ್ದೆಯಡಿ ಬರುವ ಅಂಗವಿಕಲರ ಕಾಯ್ದೆ ಕಾನೂನು ಕುರಿತ ಜಾಗೃತಿ ನಾಮ ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿರುವ ವಿವಿಧ ಯೋಜನೆಗಳಡಿ ಅರ್ಹ ಅಂಗವಿಕಲರು ಅರ್ಜಿ ಸಲ್ಲಿಸಿದ್ದ ಸಂದರ್ಭ ಮೊದಲಾದ್ಯತೆ ನೀಡಬೇಕು. ಗ್ರಾಪಂ ಮಟ್ಟದಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಬಯಸುವವರಿಗೆ ಸ್ಥಳೀಯವಾಗಿ ಜಾಬ್ ಕಾರ್ಡ್ ಮಾಡಿಸಿ ನಿಯಮನುಸಾರ ಉದ್ಯೋಗ ನೀಡಲು ಕ್ರಮವಹಿಸಬೇಕು. 15ನೇ ಹಣಕಾಸು ಯೋಜನೆಯಡಿ ಸಾಮೂಹಿಕ -ಫಲಾನುಭವಿಗಳ ಆಯ್ಕೆಗೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ವೈಯಕ್ತಿಕ ಫಲಾನುಭವಿಗಳ ಆಯ್ಕೆಗೆ ಕುಂದುಕೊರತೆ ಸಭೆಯಲ್ಲಿ ಅಂಗವಿಕಲರು ಮನವಿ ಮಾಡಿದ್ದು, ಅದರ ಸಾಧ್ಯತೆ ಪರಿಶೀಲಿಸಿ ಮಾಹಿತಿ ನೀಡುವಂತೆ ಹೇಳಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ. ಸೌದಾಗರ, ಆಹಾರ ಇಲಾಖೆ ಉಪ ನಿರ್ದೇಶಕ ವಿನಯಕುಮಾರ ಪಾಟೀಲ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ವಸೀಂ ಬಾಬಾ ಮುದ್ದೇಬಿಹಾಳ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಜಗದೀಶ ಕೆ. ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net