ಕೌದಳ್ಳಿ, ಮಲ್ಲಯ್ಯನಪುರ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಬಹುತೇಕ ಸಾರಿಗೆ ಬಸ್‌ಗಳು ನಿಲ್ಲಿಸುತ್ತಿಲ್ಲ. ಇದರಿಂದ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾದು ನಿಲ್ಲುವಂತಾಗಿದ್ದು, ಹೆಚ್ಚಿನ ರೀತಿಯಲ್ಲಿ ಸಮಸ್ಯೆ ಅನುಭವಿಸುವಂತಾಗಿದೆ. ಜನರಿಗೂ ತೊಂದರೆಯಾಗಿದೆ. ಆದ್ದರಿಂದ ನಿಲ್ದಾಣಗಳಲ್ಲಿ ಬಸ್‌ಗಳು ನಿಲ್ಲಿಸುವಂತೆ ಕ್ರಮ ವಹಿಸಬೇಕೆಂದು ಸಭೆಯಲ್ಲಿದ್ದ ಸಾರ್ವಜನಿಕರೆಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಳ್ಯ ರಾಚಯ್ಯ , ಬೆಳಗ್ಗೆ 7 ಗಂಟೆಯಿಂದ 10ರವರೆಗೆ ಹಾಗೂ ಸಂಜೆ 4 ರಿಂದ 8 ರವರೆಗೆ ಬಸ್ ನಿಲುಗಡೆಯಾಗುವಂತೆ ಸಾರಿಗೆ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ಇನ್ನು ಸತ್ತಾರಮೇಡಿನ ಮಹಿಳೆಯೊಬ್ಬರು ಮಾತನಾಡಿ, ಸತ್ತಾರ ಮೇಡಿನ ಗ್ರಾಮದ ಜನರು ಪಡಿತರವನ್ನು ಪಡೆಯಬೇಕಾದರೆ ಮಲ್ಲಯ್ಯನಪುರಕ್ಕೆ ಆಗಮಿಸಬೇಕಾಗಿದೆ. ಇದರಿಂದ ಜನರಿಗೆ ತುಂಬ ತೊಂದರೆಯಾಗಿದೆ. ಆದ್ದರಿಂದ ಸತ್ತಾರ ಮೇಡಿನಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಒತ್ತಾಯಿಸಿದರು. ಇದಕ್ಕೆ ಅಗತ್ಯ ಕ್ರಮವಹಿಸುವುದಾಗಿ ಆಹಾರ ಶಿರಸ್ತೇದಾರ್ ವಿಷ್ಣುಕುಮಾರ್ ತಿಳಿಸಿದರು.
ಪ್ರಯೋಜನ ಪಡೆಯಿರಿ: ಸಮಿತಿ ಅಧ್ಯಕ್ಷ ಪಾಳ್ಯ ರಾಚಯ್ಯ ಮಾತನಾಡಿ, ಸರ್ಕಾರ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದ್ದು, ಪ್ರತಿ ಫಲಾನುಭವಿಗೂ ಸವಲತ್ತು ದೊರಕಬೇಕು ಎನ್ನುವುದು ಸಮಿತಿಯ ಉದ್ದೇಶ. ಆದ್ದರಿಂದ ಈವರೆಗೂ ಈ ಯೋಜನೆಯಿಂದ ವಂಚಿತರಾಗಿದ್ದರೆ ಅಗತ್ಯ ದಾಖಲೆಗಳನ್ನು ನೀಡಿ ಯೋಜನೆಯ ಪ್ರಯೋಜನ ಪಡೆಯಬೇಕು. ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ಬಗೆಹರಿಸುವುದರ ಮೂಲಕ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷೃ ಸಲ್ಲದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೌದಳ್ಳಿಯ ರೇವತಿ, ಕುರಟ್ಟಿ ಹೊಸೂರಿನ ರಾಜಮ್ಮ, ಕಮಲಮ್ಮ, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಸೋಮಶೇಖರ್, ಸಿದ್ದಪ್ಪಾಜಿ, ಗೋವಿಂದ, ಮುಷಿರ್ ಅಹಮದ್, ಶೇಖರ್, ಮಹದೇವಯ್ಯ, ಮಹಾದೇವಮ್ಮ ಇತರರು ಇದ್ದರು.