Minister RB Thimmapur ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಅಹೋರಾತ್ರಿ ಧರಣಿ!
ವಿಧಾನಸಭಾ ಕಲಾಪ
Published on:
Copied
Follow Us
ಬೆಂಗಳೂರು: ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ(RB Thimmapur) ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು, ಇಂದು ರಾತ್ರಿ ಸದನದ ಒಳಗೇ ವಾಸ್ತವ್ಯ ಹೂಡಿ 'ಅಹೋರಾತ್ರಿ ಧರಣಿ' ನಡೆಸಲು ವಿಪಕ್ಷಗಳು ನಿರ್ಧರಿಸಿವೆ.
ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಆರೋಪ ಈಗ ವಿಧಾನಸಭೆಯ ಕಲಾಪವನ್ನೇ ಸ್ತಬ್ಧಗೊಳಿಸಿದೆ. ಅಬಕಾರಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಚಿವ ತಿಮ್ಮಾಪುರ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.
ಕಲಾಪದ ವೇಳೆ ಸ್ಪೀಕರ್ ಯು.ಟಿ. ಖಾದರ್ ಅವರ ಮಾತು ಕೇಳದ ಶಾಸಕರು, ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಚಿವರನ್ನು ವಜಾ ಮಾಡುವವರೆಗೂ ಕಲಾಪ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಶಾಸಕರು ಸದನದ ಒಳಗೆ ಹಾಸಿಗೆ ಮತ್ತು ದಿಂಬುಗಳನ್ನು ತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಇಡೀ ರಾತ್ರಿ ಸದನದಲ್ಲೇ ಕುಳಿತು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಆರ್. ಅಶೋಕ್ ಕರೆ ನೀಡಿದ್ದಾರೆ.
ಆರ್. ಅಶೋಕ್ ಕಿಡಿ
ಧರಣಿ ಕುರಿತು ಮಾತನಾಡಿದ ಆರ್. ಅಶೋಕ್, "ಸಚಿವ ತಿಮ್ಮಾಪುರ ಅವರು ಅಬಕಾರಿ ಇಲಾಖೆಯಲ್ಲಿ ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳ ಬೆಂಬಲವೂ ಇದೆ. ಸಚಿವರ ರಾಜೀನಾಮೆ ಪಡೆಯುವವರೆಗೂ ನಾವು ಸದನದಿಂದ ಹೊರಗೆ ಹೋಗುವುದಿಲ್ಲ. ಈ ಅಹೋರಾತ್ರಿ ಧರಣಿ ಸರ್ಕಾರದ ಅಂತ್ಯದ ಆರಂಭ" ಎಂದು ಗುಡುಗಿದ್ದಾರೆ.
ಇನ್ನೊಂದೆಡೆ ಆಡಳಿತ ಪಕ್ಷದ ಸಚಿವರು ವಾದ ಮಂಡಿಸಿ, "ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಕಲಾಪವನ್ನು ಹಾಳು ಮಾಡುತ್ತಿವೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಸಚಿವರ ರಾಜೀನಾಮೆ ಕೇಳುವುದು ಸರಿಯಲ್ಲ" ಎಂದು ತಿರುಗೇಟು ನೀಡಿದ್ದಾರೆ.