ಗ್ರೇಟರ್ ಬೆಂಗಳೂರು 5 ಪಾಲಿಕೆಗಳ 369 ವಾರ್ಡ್​​ಗಳ ಮೀಸಲಾತಿ ಪ್ರಕಟ; ಮಹಿಳೆಯರಿಗೆ ಶೇ. 50ರಷ್ಟು ಸ್ಥಾನ ಮೀಸಲು | Greater Bengaluru Authority

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengaluru Authority) ಅಡಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ 5 ನಗರ ಪಾಲಿಕೆಗಳ ವ್ಯಾಪ್ತಿಯ ಒಟ್ಟು 369 ವಾರ್ಡ್‌ಗಳ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಅಂತಿಮ ಮೀಸಲಾತಿ ಪಟ್ಟಿಯನ್ನು ಸರ್ಕಾರ ಶನಿವಾರ(ಮಾ. 07) ಪ್ರಕಟಿಸಿದೆ.
ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024ರ ಪ್ರಕರಣ 29ರ ಅಡಿಯಲ್ಲಿ ಸರ್ಕಾರಕ್ಕೆ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಈ ಅಧಿಸೂಚನೆ ಹೊರಡಿಸಲಾಗಿದೆ. ​2011ರ ಜನಗಣತಿಯ ಆಧಾರದ ಮೇಲೆ 5 ನಗರ ಪಾಲಿಕೆಗಳ 369 ವಾರ್ಡ್‌ಗಳ ಕರಡು ಮೀಸಲಾತಿ ಪಟ್ಟಿಯನ್ನು ಜನವರಿ 8 ರಂದು ಪ್ರಕಟಿಸಲಾಗಿತ್ತು. 
ಈ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಜನವರಿ 23ರ ಸಂಜೆ 5.30ರವರೆಗೆ ಕಾಲಾವಕಾಶ ನೀಡಲಾಗಿತ್ತು. ​ಸಾರ್ವಜನಿಕರಿಂದ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.
2026  ​ಫೆಬ್ರವರಿ 17ರಂದು ನಡೆದ ಸಭೆಯಲ್ಲಿ ಸಮಿತಿಯು ಎಲ್ಲಾ ಆಕ್ಷೇಪಣೆಗಳನ್ನು ಮಾರ್ಗಸೂಚಿಗಳನ್ವಯ ಕೂಲಂಕಷವಾಗಿ ಪರಿಶೀಲಿಸಿದೆ. ಸಮರ್ಥನೀಯವೆಂದು ಕಂಡುಬಂದ ಕೆಲವು ಆಕ್ಷೇಪಣೆಗಳನ್ನು ಪುರಸ್ಕರಿಸಿ, ಮೀಸಲಾತಿ ಪಟ್ಟಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ.
​​
ಅಂತಿಮ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರಿಗೆ (ಶೇ.50) ನಿಯಮಾನುಸಾರ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಸಾಮಾನ್ಯ ವರ್ಗದ ಸ್ಥಾನಗಳ ಪ್ರಮಾಣವನ್ನು ಸಹ ಮಾರ್ಗಸೂಚಿಯಂತೆ ಕಾಯ್ದುಕೊಳ್ಳಲಾಗಿದ್ದು, ಸಮಿತಿಯ ಶಿಫಾರಸನ್ನು ಸರ್ಕಾರವು ಅಂಗೀಕರಿಸಿ ಅಂತಿಮ ಅಧಿಸೂಚನೆ ಹೊರಡಿಸಿದೆ. 
ಈ ಅಧಿಸೂಚನೆ ಬೆನ್ನಲ್ಲೇ ಶೀಘ್ರದಲ್ಲೇ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net