ಆರ್ಥಿಕ, ರಾಜಕೀಯವಾಗಿಯೂ ಒಳಮೀಸಲಾತಿ ಬೇಕು; ಪರಿಶಿಷ್ಟ ಎಡ ಸಮುದಾಯದ ಹೊಸ ಕೋರಿಕೆ ಅನುದಾನ ಹಂಚಿಕೆಯಲ್ಲೂ ಮಾನದಂಡ ಅಳವಡಿಕೆಗೆ ಆಗ್ರಹ

Reservation
Reservation
Published on
|ಶಿವಪ್ರಸಾದ್ ಅರ್ಜುನಹಳ್ಳಿ ಬೆಂಗಳೂರು
ದಶಕಗಳ ಸುದೀರ್ಘ ಸಂಘರ್ಷ, ಸಾಮಾಜಿಕ ನ್ಯಾಯದ ಹಕ್ಕೊತ್ತಾಯ ಹಾಗೂ ಸಮುದಾಯಗಳ ನಿರಂತರ ಹೋರಾಟಕ್ಕೆ ಮನ್ನಣೆ ನೀಡಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದ ಬೆನ್ನಲ್ಲೇ ಒಳಮೀಸಲಾತಿ ಕೋರಿಕೆಯ ಹೊಸ ಕೂಗು ಪ್ರತಿಧ್ವನಿಸಲಾರಂಭಿಸಿದೆ. ಒಳಮೀಸಲಾತಿ ಆರ್ಥಿಕ ಸಬಲೀಕರಣ ಹಾಗೂ ರಾಜಕೀಯ ಪ್ರಾತಿನಿಧ್ಯವೂ ಇರಬೇಕೆಂಬುದು ಈ ಬೇಡಿಕೆಯ ಸಾರ.
ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಒಳಮೀಸಲಾತಿ ಮಾದರಿ ಕರ್ನಾಟಕದಲ್ಲೂ ಮರುಸೃಷ್ಟಿ ಆಗಬೇಕೆಂಬುದು ಪರಿಶಿಷ್ಟ ಎಡ ಸಮುದಾಯದ ಪ್ರಮುಖ ಆಗ್ರಹ. ನೇಮಕಾತಿಯಲ್ಲಷ್ಟೇ ಅಲ್ಲದೆ, ರಾಜಕೀಯ ಹಾಗೂ ಶೈಕ್ಷಣಿಕ ಮೀಸಲಾತಿ ಮತ್ತು ಸರ್ಕಾರದ ಅನುದಾನ ಹಂಚಿಕೆಯಲ್ಲೂ ಒಳಮೀಸಲಾತಿಯನ್ನು ಸಮಗ್ರ ಮಾನದಂಡವನ್ನಾಗಿ ಅಳವಡಿಸಿಕೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.
ವಿಶೇಷವಾಗಿ ಎಸ್​ಸಿಪಿ ಮತ್ತು ಟಿಎಸ್​ಪಿ ಯೋಜನೆಯಡಿ ಬಿಡುಗಡೆಯಾಗುವ ಅನುದಾನದ ಹಂಚಿಕೆ ಜಿಲ್ಲಾವಾರು ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿರಬೇಕೆಂಬ ಬೇಡಿಕೆ ಇದೆ. ಎಡಗೈ ಹಾಗೂ ಬಲಗೈ ಸಮುದಾಯಗಳ ವಾಸ್ತವ ಜನಸಂಖ್ಯೆ ಪರಿಗಣಿಸಿ, ಅನುದಾನದ ಪ್ರತಿ ಹನಿಯೂ ತಳಮಟ್ಟದ ಜನರಿಗೆ ತಲುಪುವಂತಾಗಬೇಕು ಎಂಬುದು ಈ ಸಮುದಾಯಗಳ ಕೋರಿಕೆ.
ಸಮಾನ ಸ್ಥಾನ ನಿರ್ಧಾರವಾಗಲಿ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಳಮೀಸಲು ಜಾರಿಯಾದರೆ ಶೋಷಿತ ಸಮುದಾಯಗಳಿಗೆ ಬಲವಾದ ಪ್ರಾತಿನಿಧ್ಯ ದೊರೆಯಲಿದೆ. ಬಲಾಢ್ಯರ ನಡುವೆ ಅಸ್ತಿತ್ವ ಕಂಡುಕೊಳ್ಳಲು ಹವಣಿಸುತ್ತಿರುವ ಸಮುದಾಯಗಳಿಗೆ, ಈ ಮೀಸಲಾತಿಯು ಆಶಾಕಿರಣವಾಗಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.
ಈಗಾಗಲೇ ಎಡ, ಬಲ, ಇತರ ಪರಿಶಿಷ್ಟ ಸಮುದಾಯಕ್ಕೆ ಅವಕಾಶ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ನಿರ್ದಿಷ್ಟವಾಗಿ ಮೀಸಲು ಪ್ರಕಾರವೇ ಸಮಾನವಾಗಿ ಸ್ಥಾನ ಕೊಡಬೇಕೆಂಬ ನಿರ್ಧಾರವಾದರೆ ಹೆಚ್ಚು ಅನುಕೂಲವಾಗಲಿದೆ ಎಂಬ ವಾದವಿದೆ. ಡಾ. ನಾಗಮೋಹನದಾಸ್ ವರದಿ ಹಾಗೂ ಸದಾಶಿವ ಆಯೋಗದ ಶಿಫಾರಸುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂಬುದು ದಲಿತ ಸಂಘಟನೆಗಳ ಪ್ರಬಲ ವಾದವಾಗಿದೆ.
ಕಲ್ಯಾಣ ಯೋಜನೆಗಳಿಗೂ ಅನ್ವಯಿಸಲಿ: ಸರ್ಕಾರ ಅನುದಾನ ಹಂಚಿಕೆಯ ಪ್ರಕ್ರಿಯೆಯಲ್ಲಿ ನಿವೇಶನ ವಿತರಣೆ ಮತ್ತು ಮನೆ ನಿರ್ವಣದಂತಹ ಕಲ್ಯಾಣ ಯೋಜನೆಗಳಿಗೂ ಒಳಮೀಸಲಾತಿ ಅನ್ವಯಿಸಬೇಕು. ಇದು ಬಡತನ ರೇಖೆಗಿಂತ ಕೆಳಗಿರುವ ಸಮುದಾಯದಕ್ಕೆ ಆರ್ಥಿಕ ನೆರವು ಒದಗಿಸಲು ಪೂರಕವಾಗಲಿದೆ ಎಂದು ಸಮುದಾಯದ ಮುಖಂಡರು ಸರ್ಕಾರಕ್ಕೆ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಬೇಡಿಕೆ, ನಿಲುವುಗಳು

ಒಳಮೀಸಲು ಆಂಧ್ರ, ತೆಲಂಗಾಣ ಮಾದರಿಯಲ್ಲಿ ಮರುಸೃಷ್ಟಿ ಆಗಬೇಕು
ರಾಜಕೀಯ, ಶೈಕ್ಷಣಿಕ, ಅನುದಾನ ಹಂಚಿಕೆಯಲ್ಲೂ ಮೀಸಲು ಬೇಕು
ಮಹಿಳೆಯರಿಗೂ ಪ್ರತ್ಯೇಕ ಸ್ಥಾನಮಾನ ನೀಡಬೇಕು
ಹೀಗಾದರಷ್ಟೇ ಶೋಷಿತ ಸಮುದಾಯಗಳಿಗೆ ಪ್ರಾತಿನಿಧ್ಯ ಸಾಧ್ಯ

ರೋಸ್ಟರ್ ಬಿಂದು ಮೇಲೆ ನಿಗಾ

ಸರ್ಕಾರದ ಒಳಮೀಸಲಾತಿ ಜಾರಿ ನಿರ್ಧಾರ ಸ್ವಾಗತಿಸಿ ರುವ ಸಮುದಾಯಗಳು, ಇದೀಗ ‘ರೋಸ್ಟರ್ ಬಿಂದು’ ನಿರ್ವಹಣೆಯ ಸೂಕ್ಷ್ಮತೆಗಳ ಮೇಲೆ ನಿಗಾ ಇರಿಸಿವೆ. ಒಳಮೀಸಲಾತಿಯ ಸಕಾರಾತ್ಮಕ ಅನುಷ್ಠಾನಕ್ಕೆ ರೋಸ್ಟರ್ ಬಿಂದುವಿನಲ್ಲಿ ಪಾರದರ್ಶಕತೆ ಅತ್ಯಗತ್ಯ, ಅದು ಇಲ್ಲದಿದ್ದಲ್ಲಿ ಈ ಸಮಗ್ರ ಸುಧಾರಣೆಯು ಹಳ್ಳ ಹಿಡಿಯುವ ಅಪಾಯವಿದೆ ಎಂಬ ಆತಂಕವಿದೆ. ಒಳ ಮೀಸಲು ವಿಷಯದಲ್ಲಿ ಸರ್ಕಾರದ ನಿರ್ಧಾರ ಬೆಂಬಲಿಸುತ್ತೇವೆ. ಆದರೆ, ರೋಸ್ಟರ್ ಬಿಂದುವಿನಲ್ಲಿ ಯಾವ ರೀತಿಯ ಮಾರ್ಪಾಟು ಮಾಡುತ್ತಾರೆಂಬ ಕುತೂಹಲವಿದೆ. ರೋಸ್ಟರ್ ಬಿಂದುವಿನಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಸಮುದಾಯಕ್ಕೆ ನಿಜವಾದ ಲಾಭ ದೊರೆಯುವುದಿಲ್ಲ ಎಂದು ಮಾಜಿ ಸಚಿವ ಆಂಜನೇಯ ಅಭಿಪ್ರಾಯಪಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net