ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕಿ ಎಸ್​.ಜಾನಕಿ ವಿಧಿವಶ

ಎಸ್​.ಜಾನಕಿ(88)
ಎಸ್​.ಜಾನಕಿ(88)
Published on
ಮೈಸೂರು: ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ದಕ್ಷಿಣ ಭಾರತದ ನೈಟಿಂಗೇಲ್ ಎಂದೇ ಪ್ರಸಿದ್ದರಾಗಿದ್ದ, ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕಿ ಎಸ್​.ಜಾನಕಿ(S Janaki) ಅವರು ಶನಿವಾರ(ಜು. 11) ಸಂಜೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವಯಸ್ಸಾಗಿತ್ತು.
ಕಳೆದ ವರ್ಷವಷ್ಟೇ ತಮ್ಮ ಏಕೈಕ ಸುಪುತ್ರನನ್ನು ಕಳೆದುಕೊಂಡಿದ್ದ ಅವರನ್ನು ಮೈಸೂರಿನ ಅಭಿಮಾನಿಯೊಬ್ಬರು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರು. ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಅವರ ನಿಧನದ ಸುದ್ದಿಗೆ ಭಾರತೀಯ ಚಿತ್ರರಂಗ ಮತ್ತು ಗಣ್ಯರು ಕಂಬನಿ ಮಿಡಿದಿದ್ದಾರೆ.
ಎಸ್. ಜಾನಕಿ ಅವರು ಸುದೀರ್ಘ ಆರು ದಶಕಗಳ ಕಾಲದ ತಮ್ಮ ಸಂಗೀತ ಪಯಣದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದೆ, ಒಡಿಯಾ ಸೇರಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 2017 ಅಕ್ಟೋಬರ್ 28ರಂದು ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಅವರು ತಮ್ಮ ಕೊನೆಯ ಸಾರ್ವಜನಿಕ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.
ವರನಟ ಡಾ. ರಾಜ್‌ಕುಮಾರ್ ಅವರೊಂದಿಗೆ ಜಾನಕಿ ಅವರು ಹಾಡಿರುವ ನೂರಾರು ಗೀತೆಗಳು ಇಂದಿಗೂ ಸಾರ್ವಕಾಲಿಕ ಸೂಪರ್ ಹಿಟ್ ಹಾಡುಗಳಾಗಿವೆ. ಪಿ. ಬಿ. ಶ್ರೀನಿವಾಸ್ ಮತ್ತು ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗಿನ ಹಾಡುಗಳು ಸಹ ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲಾಗಿ ಉಳಿದಿವೆ.
ಇನ್ನೂ ಎಸ್. ಜಾನಕಿ ಅವರು ಅತ್ಯುತ್ತಮ ಹಿನ್ನೆಲೆ ಗಾಯಕಿ ವಿಭಾಗದಲ್ಲಿ ಒಟ್ಟು 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2013ರಲ್ಲಿ ಭಾರತ ಸರ್ಕಾರವು ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಿತ್ತು. ಆದರೆ ದಕ್ಷಿಣ ಭಾರತದ ಕಲಾವಿದರಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ ಮತ್ತು ಈ ಪ್ರಶಸ್ತಿ ತಮಗೆ ತಡವಾಗಿ ಸಿಕ್ಕಿದೆ ಎಂದು ಹೇಳಿ ಅವರು ಪ್ರಶಸ್ತಿಯನ್ನು ನಯವಾಗಿಯೇ ನಿರಾಕರಿಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net