ತೊಂಡೆಬಾವಿ: ಹೋಬಳಿಯ ಕಾಮಗಾನಹಳ್ಳಿ ಶ್ರೀಮೈಲಾರಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ಗಂಗಮಾಳಮ್ಮ ದೇಗುಲಗಳ ಜೀಣೋರ್ದ್ಧಾರದ ಪ್ರಯುಕ್ತ ದೇಗುಲ ಪ್ರಾರಂಭೋತ್ಸವ, ಸಂಪ್ರೋಕ್ಷಣೆ, ವಿಗ್ರಹ ಮತ್ತು ಕಳಸ ಪುನರ್ ಪ್ರತಿಷ್ಠಾಪನಾ ಕಾರ್ಯ, ಕುಂಬಾಭಿಷೇಕ, ಹೋಮ&ಹವನ ಮಾಡಲಾಯಿತು.
ಗಣಪತಿ ಪ್ರಾರ್ಥನೆ, ರಕ್ಷಾಕಂಕಣಧಾರೆ, ವೇದ ಪಾರಾಯಣ, ವೇದಿಕಾರ್ಚನೆ, ವಾಸ್ತು ಪೂಜೆ, ವಾಸ್ತು ಮಂಡಲ ಆರಾಧನೆ, ಅಗ್ನಿಸ್ಥಾಪನೆ ಸ್ಥಿರಬಿಂಬ ಪ್ರತಿಷ್ಠಾಪನೆ, ಧಾರ್ಮಿಕ ಕಾರ್ಯಗಳೊಂದಿಗೆ ಭಾನುವಾರ ಪೂಜೆ ಪೂರ್ಣಗೊಂಡವು.ಹೂಗಳಿಂದ, ಹಣ್ಣು, ತರಕಾರಿ ದೇವರನ್ನು ಶೃಂಗರಿಸಲಾಗಿತ್ತು.
ದೇವಸ್ಥಾನ ಉದ್ಘಾಟನೆ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಸರ್ಕಾರದ ಸಹಾಯಧನ ಪಡೆಯದೆ ಗ್ರಾಮದಲ್ಲಿ ಭಕ್ತರೇ ಸೇರಿಕೊಂಡು ದೇವಸ್ಥಾನ ನಿರ್ಮಿಸಿ ಉದ್ಘಾ ಟನೆ ಮಾಡುತ್ತಿರುವುದ ಶ್ಲಾಘನೀಯ. ಗ್ರಾಮದ ಪ್ರತಿ ವಿದ್ಯಾರ್ಥಿಯೂ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ಪರಸ್ಪರ ಗೌರವಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಮಾಜಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಎಲ್ಲರೂ ಕೋಮುಸೌಹಾರ್ದತೆಯಿಂದ ಬದುಕಲು ದೇವಸ್ಥಾನ ಅಗತ್ಯ. ಮನುಷ್ಯನ ಮಾನಸಿಕ ನೆಮ್ಮದಿಗೂ ಇವು ಕಾರಣ ಎಂದರು. ಗ್ರಾಮದ ಮುಖ್ಯಸ್ಥರು ಇದ್ದರು.