ಸೇಡಂನ ಚಿಂಚೋಳಿ ಕ್ರಾಸ್ನಲ್ಲಿ ಬಾಕಿ ಉಳಿಸಿಕೊಂಡಿರುವ ಬೆಳೆ ವಿಮೆ ಹಣ ಕೂಡಲೇ ಜಮೆಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತಿದ್ದ ರೈತರನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವುದು.
ಸೇಡಂ: ಕಳೆದ ಅವಧಿಯಲ್ಲಿನ ಬಾಕಿ ಉಳಿಸಿಕೊಂಡ ರೈತರ ಬೆಳೆ ವಿಮೆ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘದಿಂದ ವಾಗ್ದರಿ- ರಿಬ್ಬನಪಲ್ಲಿ (ಚಿಂಚೋಳಿ ಕ್ರಾಸ್) ಮುಖ್ಯರಸ್ತೆಯಲ್ಲಿ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಬೆಳಗ್ಗೆ 12 ಗಂಟೆ ಸುಮಾರಿಗೆ ರೈತ ಸಂದ ಪದಾಧಿಕಾರಿಗಳು ಹಾಗೂ ರೈತರು ಮುಖ್ಯರಸ್ತೆಯಲ್ಲಿ ಸಂಚಾರ ತಡೆದು ಹೋರಾಟಕ್ಕೆ ಕುಳಿತರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಹೋರಾಟ ಮೊಟಕುಗೊಳಿಸಿದರು. ಕೆಲಸಮಯದ ಬಳಿಕ ಬಿಡುಗಡೆ ಮಾಡಿದರು.
ರೈತ ಸಂದ ತಾಲೂಕು ಅಧ್ಯಕ್ಷ ಶಾಂತಕುಮಾರ ಚನ್ನಕ್ಕಿ ಮಾತನಾಡಿ, ಜೂ.19ರಂದು ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ವಾರದೊಳಗಾಗಿ 2ನೇ ಕಂತಿನ ಬೆಳೆ ವಿಮೆ ಪರಿಹಾರ ಹಣ ರೈತರ ಖಾತೆಗೆ ಜಮಾಗೊಳಿಸುಂತೆ ಕೋರಲಾಗಿತ್ತು. ಆದರೆ ಈವರೆಗೂ ಯಾವುದೇ ಚಕಾರ ಎತ್ತುವ ಕೆಲಸ ಮಾಡಿಲ್ಲ. ಹೀಗಾಗಿ ಮೊದಲೇ ಪೊಲೀಸ್ ಇಲಾಖೆಗೆ ಪತ್ರ ಸಲ್ಲಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದೇವು. ಆದರೂ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಪೊಲೀಸರು ಮಾಡಿದ್ದಾರೆ. ಇದು ಅನ್ಯಾಯದ ಪರಮಾವಧಿಯಾಗಿದೆ ಎಂದು ಕಿಡಿಕಾರಿದರು.
ಕಳೆದ ವರ್ಷ ತಾಲೂಕಿನ ರೈತರು ನಿಗದಿತ ಹಣ ಪಾವತಿಸಿ ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ ಅತಿವೃಷ್ಠಿಯಿಂದಾಗಿ ಬೆಳೆ ಹಾನಿಗೊಳಗಾಯಿತು. ಮೊದಲ ಭಾಗವಾಗಿ ಅಲ್ಪ ಹಣ ನೀಡಿದ್ದು ಬಿಟ್ಟರೆ ವಿಮೆ ಪರಿಹಾರ ಪೂರ್ಣ ಪ್ರಮಾಣದಲ್ಲಿ ನೀಡಿಲ್ಲ. ಕಳೆದ ವರ್ಷದಲ್ಲಿ ರೈತರು ಪಡೆದ ವಿಮೆಗೆ ಸರಿಯಾದ ನ್ಯಾಯ ಸಿಕ್ಕಿಲ್ಲ. ಇದೀಗ ಕೃಷಿ ಇಲಾಖೆ ಅಧಿಕಾರಿಗಳು ಪ್ರಸ್ತಕ ಸಾಲಿನ ಬೆಳೆ ವಿಮೆ ಮಾಡಿಕೊಳ್ಳುವಂತೆ ಎಲ್ಲೆಡೆ ಪ್ರಚಾರ ನಡೆಸುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಮೆ ಮಾಡಿಸಿಕೊಳ್ಳಿ ಎಂದು ಬೊಬ್ಬೆ ಹಾಕುವ ಕೃಷಿ ಇಲಾಖೆ ಅಧಿಕಾರಿಗಳು ಇದೀಗ ಪರಿಹಾರದ ಹಣ ಏಕೆ ಜಮೆ ಆಗಿಲ್ಲ ಎಂದು ಪ್ರಶ್ನಿಸಿದರೆ ವಿಮೆ ಕಂಪನಿಗಳನ್ನು ಕೇಳಿ ಎನ್ನುತ್ತಾರೆ. ಹಾಗಾದರೆ ಇನ್ಶುರೆನ್ಸ್ ಮಾಡಿಕೊಳ್ಳಿ ಎಂದು ಹೇಳುವುದು ಯಾಕೆ ? ರೈತ ದೇಶದ ಬೆನ್ನೆಲುಬು ಎನ್ನುತ್ತೀರಿ, ಆದರೆ ತಮ್ಮ ಹಕ್ಕಿಗಾಗಿ ಹೋರಾಟ ಮಾಡಿದರೆ ಕೇಸ್ ಹಾಕಿಸ್ಥಿರಿ. ಕೆಲ ದಿನಗಳವರೆಗೆ ಕಾದು ನೋಡಲಾಗುವುದು. ಆದರೂ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ತಾಲೂಕಿನ ರೈತರನ್ನು ಸೇರಿಸಿಕೊಂಡು ಬೃಹತ್ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು.
ಪ್ರಮುಖರಾದ ರವಿ ಪಾಟೀಲ್, ಚಂದ್ರಶೇಖರ ಗುತ್ತೇದಾರ್, ಅಮಶೆಟ್ಟಿ ಪಾಟೀಲ್, ಮಲ್ಲಿಕಾರ್ಜುನ ಮೆಕಾನಿಕ್, ಚಂದ್ರಕಾಂತ ಯಲ್ಮಡಗಿ, ಚಂದ್ರಶೇಖರ ಪೂಜಾರಿ, ಚಂದ್ರಕಾಂತ ತೊಟ್ನಳ್ಳಿ, ಭಾರತೀಶ ಕುಲಕರ್ಣಿ, ನಾರಾಯಣ ದುಗನೂರ ಇತರರಿದ್ದರು.
"
ರೈತರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸುತಿದ್ದರೆ ಆಳುವ ವರ್ಗ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ವಿಮೆ ಮಾಡಿಸಿದ ರೈತರಿಗೆ ಸಿಗಬೇಕಾದ ಪರಿಹಾರದ ಹಣ ನೀಡಿದರೆ ಹೋರಾಟದ ಹಾದಿ ಹಿಡಿಯುವ ಅನಿವಾರ್ಯತೆ ಇರುತ್ತಿರಲಿಲ್ಲ. ಪಕ್ಕದ ಜಿಲ್ಲೆಗಳಲ್ಲಿ ರೈತರಿಗೆ ಹಣ ಜಮೆ ಆಗಿದೆ. ಕಲಬುರಗಿಯಲ್ಲಿ ಮಾತ್ರ ಸಮಸ್ಯೆ ಸೃಷ್ಟಿಸಲಾಗಿದೆ.