ಕಿಕ್ಕೇರಿಯ ಕೆಪಿಎಸ್ ಶಾಲೆಯಲ್ಲಿ ನಾಡಗೀತೆ, ಸುಗಮ ಸಂಗೀತ ಶತಮಾನೋತ್ಸವ ಸಮಾರಂಭಕ್ಕೆ ಸಾಮೂಹಿಕ ಗೀತೆಗಳನ್ನು ಹಾಡಲು ಈಚೆಗೆ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿಯೊಂದಿಗೆ ಶಿಕ್ಷಕ ಸಮೂಹ, ಶಾಲಾ ಕಾಲೇಜು ಮಕ್ಕಳು ತಾಲೀಮು ನಡೆಸಿದರು.
ಕಿಕ್ಕೇರಿ: ಕನ್ನಡ ನಾಡು, ನುಡಿ ಮತ್ತಷ್ಟು ಶ್ರೀಮಂತಗೊಳಿಸುವುದು ಕನ್ನಡಿಗರ ಕರ್ತವ್ಯವಾಗಿದೆ ಎಂದು ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.
ಇಲ್ಲಿನ ಕೆಪಿಎಸ್ ಶಾಲೆ ಆವರಣದಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಪಂದನಾ ಫೌಂಡೇಷನ್ ಆಶ್ರಯದಲ್ಲಿ ಇತ್ತೀಚೆಗೆ ನಾಡಗೀತೆ, ಸುಗಮ ಸಂಗೀತ ಶತಮಾನೋತ್ಸವ ಸಮಾರಂಭ ಪ್ರಯುಕ್ತ ಮಕ್ಕಳಿಗೆ ಹಾಡುಗಾರಿಕೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡಗೀತೆ, ಸುಗಮ ಸಂಗೀತ ಗೀತೆಗೆ ನೂರು ವರ್ಷ ತುಂಬಿದೆ. ಈ ನೆನಪಿಗಾಗಿ ಮಕ್ಕಳಿಗೆ ನಾಡು, ನುಡಿ ಕುರಿತು ಅಭಿರುಚಿ ಮೂಡಿಸಲು ಗ್ರಾಮೀಣ ಪ್ರದೇಶದ ಮಕ್ಕಳಿಂದ ಸಾಮೂಹಿಕವಾಗಿ ನಾಡಗೀತೆ, ಸುಗಮ ಸಂಗೀತ ಗೀತೆ ಹಾಡಿಸಲು ಮುಂದಾಗಿದೆ. 2 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಏಕಕಾಲದಲ್ಲಿ ಹಾಡಿಸುವುದು ತಮ್ಮ ಉದ್ದೇಶವಾಗಿದೆ ಎಂದರು.
ಹಳ್ಳಿಗಾಡಿನ ಮಕ್ಕಳಲ್ಲಿ ಪ್ರತಿಭೆ ಇದೆ. ಇದನ್ನು ಗುರುತಿಸುವ ಕೆಲಸವಾಗಬೇಕು. ಮಕ್ಕಳಿಗೆ ಉತ್ತಮ ಕಂಠವಿದೆ. ಇವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಯತ್ನಿಸುವೆ. ನವೆಂಬರ್ ತಿಂಗಳಿನಲ್ಲಿ ಸರ್ಕಾರಿ ಶಾಲೆ, ಅನುದಾನರಹಿತ ಶಾಲೆ, ಕಾಲೇಜು ಮಕ್ಕಳನ್ನು ಒಂದೆಡೆ ಸೇರಿಸಿ ಈ ವಿನೂತನ ಯತ್ನ ಮಾಡಲಾಗುತ್ತಿದೆ. ಮಕ್ಕಳಿಗೆ ತರಬೇತಿ ನೀಡಲಾಗುತ್ತಿದ್ದು ಉತ್ತಮವಾಗಿ ಮಕ್ಕಳು ಸ್ಪಂದಿಸುತ್ತಿರುವುದು ಸಂತಸವಾಗಿದೆ ಎಂದು ನುಡಿದರು.
ಮಕ್ಕಳು ಸಾಮೂಹಿಕವಾಗಿ ಏಕಕಂಠದಲ್ಲಿ ನಾಡಗೀತೆ, ಕಿಕ್ಕೇರಿಯವರಾದ ಮೈಸೂರು ಮಲ್ಲಿಗೆ ಕವಿ ಕೆ.ಎಸ್. ನರಸಿಂಹಸ್ವಾಮಿಯ ನಾವು ಭಾರತೀಯರು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಲು ಗಾಯಕ ಕಿಕ್ಕೇರಿಯಿಂದ ತರಬೇತಿ ಪಡೆಯಲು ಮುಂದಾಗಿ ಸಂಭ್ರಮಪಟ್ಟರು.
ಪ್ರಾಂಶುಪಾಲ ಸಹದೇವು, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಮುಖ್ಯಶಿಕ್ಷಕಿ ಮಮತಾ, ಭಾರತಿ, ಕೇಂಬ್ರಿಡ್ಜ್ ಶಾಲೆ ಮುಖ್ಯಶಿಕ್ಷಕಿ ದೀಪಾ, ರಾಯಲ್ ಶಾಲೆಯ ದೀಪಿಕಾ, ಚೈತನ್ಯ ಶಾಲೆಯ ಮಲ್ಲಿಕಾರ್ಜುನ, ಪರಿಸರ ಪ್ರೇಮಿ ಊಗಿನಹಳ್ಳಿ ವೆಂಕಟೇಶ್, ಕೆ.ವಿ.ಬಲರಾಮು ಇದ್ದರು.