ಸಿಂಹಾವಲೋಕನದ ಜತೆಗೆ ಭವಿಷ್ಯದ ಚಿಂತನೆ ಅಗತ್ಯ| ಜೆಜೆ ಆ್ಯಕ್ಟ್ ಜಾರಿಯಾಗಿ ದಶಕ ಪೂರ್ಣ

ಜ್ಯುವೆನೈಲ್​ ಜಸ್ಟೀಸ್​ ಸಮಿತಿಯ ಎರಡು ದಿನಗಳ ರಾಜ್ಯಮಟ್ಟದ ಪಾಲುದಾರರ ವಾರ್ಷಿಕ ಸಮಾಲೋಚನಾ ಕಾರ್ಯಕ್ರಮವನ್ನು ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಉದ್ಘಾಟಿಸಿದರು.
ಜ್ಯುವೆನೈಲ್​ ಜಸ್ಟೀಸ್​ ಸಮಿತಿಯ ಎರಡು ದಿನಗಳ ರಾಜ್ಯಮಟ್ಟದ ಪಾಲುದಾರರ ವಾರ್ಷಿಕ ಸಮಾಲೋಚನಾ ಕಾರ್ಯಕ್ರಮವನ್ನು ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಉದ್ಘಾಟಿಸಿದರು.
Published on

ಬೆಂಗಳೂರು:

ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆಯು (ಜೆಜೆ ಆ್ಯಕ್ಟ್​) ಜಾರಿಗೆ ಬಂದು ಒಂದು ದಶಕದಲ್ಲಿ ಸಾಧಿಸಿರುವ ಪ್ರಗತಿಯನ್ನು ಸಿಂಹಾವಲೋಕನ ಮಾಡುವ ಜತೆಗೆ ಮುಂದಿನ ಕಾರ್ಯತಂತ್ರಗಳ ಕುರಿತು ಗಂಭೀರ ಚೀಂತನೆ ಮಾಡುವ ಅವಶ್ಯಕತೆಯಿದೆ ಎಂದು ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹೇಳಿದ್ದಾರೆ.

ಹೈಕೋರ್ಟ್​ನ ಜ್ಯುವೆನೈಲ್​ ಜಸ್ಟೀಸ್​ ಸಮಿತಿ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ನಗರದ ನ್ಯಾಯಾಂಗ ಅಕಾಡೆಮಿಯ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯಮಟ್ಟದ ಪಾಲುದಾರರ ವಾರ್ಷಿಕ ಸಮಾಲೋಚನಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಬಾಲನ್ಯಾಯ ವ್ಯವಸ್ಥೆಯನ್ನು ವಯಸ್ಕರ ಅಪರಾಧ ನ್ಯಾಯ ವ್ಯವಸ್ಥೆಯ ಸಂಕುಚಿತ ಭಾಗ ಎಂಬ ದೃಷ್ಟಿಕೋನದಲ್ಲಿ ನೋಡಬಾರದು. ಬದಲಾಗಿ ಈ ವ್ಯವಸ್ಥೆಯು ಕಡ್ಡಾಯವಾಗಿ ಮಕ್ಕಳ ಪಾಲನೆ, ರಕ್ಷಣೆ ಮತ್ತು ಪುನರ್ವಸತಿಯ ತತ್ವಗಳ ಆಧಾರದಲ್ಲಿಬೇಕು. ಮಕ್ಕಳ ವಿಚಾರದಲ್ಲಿ ಕೇವಲ ಮೇಲ್ಮುಖ ವಿಚಾರಣೆ ಸಾಲದು. ಅವರ ಸಾಮಾಜಿಕ, ಮಾನಸಿಕ ಹಾಗೂ ಕೌಟುಂಬಿಕ ಹಿನ್ನಲೆಗಳನ್ನು ಪರಿಗಣಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಸಮನ್ವಯತೆ ಅಗತ್ಯ:

ನಿಮಾನ್ಸ್​ನಂತಹ ಸಂಸ್ಥೆಗಳ ಜತೆಗಿನ ಸಮನ್ವಯತೆಯಿಂದ ಮಕ್ಕಳಿಗಾಗಿ ಮಾನಸಿಕ ಆರೋಗ್ಯ ಸೇವೆಗಳನ್ನು ರಾಜ್ಯದ್ಯಂತ ವಿಸ್ತರಿಸಬೇಕು. ಆಘಾತಕ್ಕೊಳಗಾದ ಮಗುವು ಹೊಸ ಜೀವನ ರೂಪಿಸಿಕೊಳ್ಳಲು ಪ್ರಾಮಾಣಿಕ ಅವಕಾಶ ಕಲ್ಪಿಸುವುದೇ ವ್ಯವಸ್ಥೆಯ ಯಶಸ್ಸಿನ ಅಳತೆಗೋಲಾಗಬೇಕು ಎಂದು ಸಿಜೆ ವಿಭು ಬಖ್ರು ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಸಂರಕ್ಷಣೆಯಲ್ಲಿ ಕಾನೂನು ಮತ್ತು ವ್ಯವಸ್ಥೆಗಳ ಪರಿಚಯ ಮತ್ತು ಮಕ್ಕಳ ಹಿತಾಸಕ್ತಿ ಕುರಿತ ಇಂಗ್ಲಿಷ್​ ಕೈಪಿಡಿ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ನ್ಯಾಯಮೂರ್ತಿಗಳಾದ ಅನು ಸಿವರಾಮನ್​, ಜಯಂತ್​ ಬ್ಯಾನರ್ಜಿ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್​, ಯೂನಿಸೆಫ್​ನ ಮಕ್ಕಳ ಸಂರಕ್ಷಣಾ ವಿಶೇಷಾಧಿಕಾರಿ ಸೋನಿ ಕುಟ್ಟಿ ಜಾರ್ಜ್​, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಂತೋಷ್​ ಕುಮಾರ್​ ಉಪಸ್ಥಿತರಿದ್ದರು.

ಸವಾಲು ಗುರುತಿಸುವ ಹೊಣೆಗಾರಿಕೆ

ಬಾಲನ್ಯಾಯ ವ್ಯವಸ್ಥೆಯ ಅನುಷ್ಠಾನದಲ್ಲಿರುವ ಸವಾಲುಗಳನ್ನು ಗುರುತಿಸುವುದು, ಯೋಜನೆಗಳ ಮೌಲ್ಯಮಾಪನ ಮಾಡುವುದು, ಹೊಣೆಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಆದ್ದರಿಂದ ರಾಷ್ಟ್ರಮಟ್ಟದ ಸಮ್ಮೇಳನಕ್ಕೆ ಮುಂಚಿತವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೈಕೋರ್ಟ್​ನ ಜ್ಯುವೆನೈಲ್​ ಜಸ್ಟೀಸ್​ ಸಮಿತಿಯ ಅಧ್ಯಕ್ಷ, ನ್ಯಾಯಮೂರ್ತಿ ಎಸ್​. ಸುನೀಲ್​ ದತ್​ ಯಾದವ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net