ಕೊರಗಜ್ಜ ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ: ನಿರ್ದೇಶಕ ಸುಧೀರ್ ಅತ್ತಾವರ್ ಸ್ಪಷ್ಟನೆ | Koragajja

Koragajja
Koragajja
Published on
ಬೆಂಗಳೂರು: ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ "ಕೊರಗಜ್ಜ" ಚಿತ್ರದ ಹಾಡುಗಳು ಇತ್ತೀಚೆಗೆ ಝೀ ಮ್ಯೂಜಿಕ್ ಮೂಲಕ ಬಿಡುಗಡೆಯಾಗಿವೆ. ಈ ಹಿನ್ನೆಲೆಯಲ್ಲಿ ಚಿತ್ರತಂಡವು ಹಾಡುಗಳಿಗೆ 'ರೀಲ್ಸ್ ಸ್ಪರ್ಧೆ'ಯನ್ನು ಘೋಷಿಸಿತ್ತು. ಆದರೆ, ಈ ವಿಚಾರವಾಗಿ ಕೆಲವು ಕಡೆಗಳಲ್ಲಿ ಉಂಟಾಗಿರುವ ಗೊಂದಲಕ್ಕೆ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಸುದೀರ್ಘ ಸ್ಪಷ್ಟೀಕರಣ ನೀಡಿದ್ದಾರೆ.

ರೀಲ್ಸ್ ಸ್ಪರ್ಧೆ ಹಾಡುಗಳಿಗಷ್ಟೇ ಸೀಮಿತ

"ನಾವು ಘೋಷಿಸಿರುವುದು ಚಿತ್ರದ ಹಾಡುಗಳಿಗೆ ರೀಲ್ಸ್ ಮಾಡುವ ಸ್ಪರ್ಧೆಯೇ ಹೊರತು, ದೈವದ ಬಗ್ಗೆ ರೀಲ್ಸ್ ಮಾಡಿ ಎಂದು ಹೇಳಿಲ್ಲ" ಎಂದು ಸುಧೀರ್ ಅತ್ತಾವರ್ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೈವಾರಾಧನೆಯ ವಿಡಿಯೋಗಳು ಸಾವಿರಾರು ಸಂಖ್ಯೆಯಲ್ಲಿ ಲಭ್ಯವಿರುವಾಗ, ಸಿನೆಮಾ ಹಾಡುಗಳಿಗೆ ರೀಲ್ಸ್ ಮಾಡುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಅಶ್ಲೀಲ ಅಥವಾ ಅಪಹಾಸ್ಯ ಮಾಡುವಂತಹ ರೀಲ್ಸ್ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

ಚಿತ್ರೀಕರಣದ ವೇಳೆ ಎದುರಾದ ಅಡೆತಡೆಗಳು

ಸಿನಿಮಾದ ಚಿತ್ರೀಕರಣದ ಹಂತದಿಂದಲೂ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಕಳಸದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ದೈವ ನರ್ತಕರೇ ಲಾಂಗು-ಮಚ್ಚುಗಳಿಂದ ಬೆದರಿಸಿ ಲಕ್ಷಾಂತರ ರೂಪಾಯಿ ನಷ್ಟ ಮಾಡಿದ್ದರು ಎಂದು ನಿರ್ದೇಶಕರು ಬೇಸರ ವ್ಯಕ್ತಪಡಿಸಿದ್ದಾರೆ. "ಕತ್ತಲೆ"ಯ ಹೆಸರಿನಲ್ಲಿ ಬೆದರಿಸುವ ತಂತ್ರಗಳು ನಡೆದರೂ, ಕೊರಗಜ್ಜನ ಆಶೀರ್ವಾದದಿಂದ ಸಿನಿಮಾ ಈಗ ಬಿಡುಗಡೆಯ ಹಂತಕ್ಕೆ ತಲುಪಿದೆ ಎಂದು ಅವರು ಹೇಳಿದ್ದಾರೆ.

ಆಚರಣೆಯಲ್ಲಿನ ಅನಿಷ್ಟ ಪದ್ಧತಿಗಳ ಬಗ್ಗೆ ಪ್ರಶ್ನೆ

ದೈವಾರಾಧನೆಯ ಹೆಸರಿನಲ್ಲಿ ನಡೆಯುವ ಕೆಲವು ಅಹಿತಕರ ಸಂಪ್ರದಾಯಗಳ ಬಗ್ಗೆ ಅತ್ತಾವರ್ ತೀಕ್ಷ್ಣವಾಗಿ ಮಾತನಾಡಿದ್ದಾರೆ. ಕೋಲ ಅಥವಾ ನೇಮದ ಸಮಯದಲ್ಲಿ ದೈವದ ಪಾತ್ರಧಾರಿಗಳು ಅಶ್ಲೀಲ ಪದಗಳನ್ನು ಬಳಸುವುದು ಪದ್ಧತಿಯ ಹೆಸರಿನಲ್ಲಿ ನಡೆಯುತ್ತಿದೆ. ನಾಗರಿಕ ಸಮಾಜದಲ್ಲಿ ಸಣ್ಣ ಮಕ್ಕಳ ಮುಂದೆ ಇಂತಹ ಪದಬಳಕೆ ಸರಿಯೇ ಎಂಬುದು ಅವರ ಪ್ರಶ್ನೆ. ಕೊರಗಜ್ಜನನ್ನು "ನೀಚ ದೈವ" ಎಂದೋ ಅಥವಾ ಜಾತಿ ಸೂಚಕ ಪದಗಳಿಂದ ಸಂಬೋಧಿಸುವುದೋ ಸರಿಯಲ್ಲ. ದೈವಕ್ಕೆ ಜಾತಿಯ ಹಂಗಿಲ್ಲ, ಅದು ನಂಬಿದವರಿಗೆ ಇಂಬು ಕೊಡುವ ಶಕ್ತಿ. ಸತಿ ಪದ್ಧತಿ ಅಥವಾ ವಿಧವೆಯರ ಮೇಲಿನ ದೌರ್ಜನ್ಯದಂತಹ ಪದ್ಧತಿಗಳನ್ನು ನಾವು ಹೇಗೆ ಕೈಬಿಟ್ಟಿದ್ದೇವೆಯೋ, ಹಾಗೆಯೇ ದೈವಾರಾಧನೆಯಲ್ಲಿರುವ ಜಾತಿ ಪದ್ಧತಿ ಮತ್ತು ಅವಹೇಳನಕಾರಿ ಆಚರಣೆಗಳನ್ನು ಕೈಬಿಡಬೇಕು ಎಂದು ಅವರು ಕರೆ ನೀಡಿದ್ದಾರೆ.
ಒಟ್ಟಾರೆಯಾಗಿ, ದೈವವನ್ನು ಗೌರವಿಸುವ ಮತ್ತು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಉದ್ದೇಶದಿಂದ ಈ ಸಿನಿಮಾ ಮಾಡಲಾಗಿದ್ದು, ಅನಗತ್ಯ ವಿರೋಧಗಳಿಗೆ ಕಿವಿಗೊಡದೆ ಸಹಕರಿಸಬೇಕೆಂದು ಚಿತ್ರತಂಡ ಮನವಿ ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net