ಗೃಹಲಕ್ಷ್ಮಿ, ಗೃಹಜ್ಯೋತಿ ಮರು ನೋಂದಣಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
Published on
ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯಲ್ಲಿ ಲಾನುಭವಿಗಳ ಮರು ನೋಂದಣಿಗೆ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ತಾಲೂಕು ಮಟ್ಟದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ.
ಮೂರು ವರ್ಷಗಳ ಹಿಂದೆ ನೋಂದಣಿ ಆಗಿದ್ದ ಸಾಕಷ್ಟು ಜನ ಅಸುನೀಗಿದ್ದು, ಅವರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗುತ್ತಿದೆ ಎಂಬ ವರದಿಗಳು ಸಾಕಷ್ಟು ಬಂದಿದ್ದವು. ಇದಲ್ಲದೆ, ಗೃಹಜ್ಯೋತಿ ಲಾನುಭವಿಗಳ ಪಟ್ಟಿ ಪರಿಷ್ಕರಣೆ ಮಾಡಬೇಕೆಂದು ಕಾಂಗ್ರೆಸ್ ಶಾಸಕರೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡೂ ಯೋಜನೆಗೆ ಮರು ನೋಂದಣಿ ಮಾಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಕೆಲವು ಗ್ಯಾರಂಟಿ ಫಲಾನುಭವಿಗಳು ಮೃತಪಟ್ಟಿದ್ದು, ಅಂದಾಜು 100 ಕೋಟಿ ಹಣ ಬೇರೆಯವರಿಗೆ ಹೋಗಿ ದುರ್ಬಳಕೆಯಾಗಿದೆ. ಇನ್ನು ಬೇರೆಯವರ ದೂರವಾಣಿ ಸಂಖ್ಯೆ ಕೊಟ್ಟಿರುವುದರಿಂದ ಸರಿಯಾದ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿದೆಯೋ, ಇಲ್ಲವೋ ಎಂದು ತಿಳಿಯಬೇಕಿದೆ. ಹೀಗಾಗಿ ಫಲಾನುಭವಿಗಳ ದಾಖಲೆ ಸಂಗ್ರಹಿಸುವ ಬಗ್ಗೆ ಸಲಹೆ ಬಂದಿದೆ. ಪ್ರತಿ ತಾಲೂಕಿನಲ್ಲಿ ಪರಿಶೀಲಿಸುತ್ತಿದ್ದೇವೆ ಎಂದು ಡಿಕೆಶಿ ತಿಳಿಸಿದರು.

2028ಕ್ಕೂ ನಾವೇ ಅಧಿಕಾರಕ್ಕೆ

2028ಕ್ಕೆ ನಮ್ಮ ಸರ್ಕಾರ ಬರುವ ಕನಸು ಕಾಣಬೇಡಿ, ಕೆಲಸ ಮಾಡಿ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನವೀನ್ ರಾಜ್ಯ ನಾಯಕರಿಗೆ ಸೂಚನೆ ನೀಡಿರುವ ಬಗ್ಗೆ ಕೇಳಿದಾಗ, ಅಮಿತ್ ಷಾ ಬಿಜೆಪಿಗೆ 122 ಸೀಟು ಬರುತ್ತದೆ. ಎಲ್ಲರೂ ಸೂಟುಬೂಟು ಸಿದ್ಧಮಾಡಿಕೊಳ್ಳಿ ಎಂದಿದ್ದರು. ನಾನು ನಮಗೆ 136 ಸೀಟು ಬರಲಿದೆ ಎಂದು ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ, 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net