ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಪಡಿತರ ವಿತರಣೆ ಕಡ್ಡಾಯ: ಆಹಾರ ಇಲಾಖೆ ಆದೇಶ -Ration distribution

ಆಹಾರ ಇಲಾಖೆ
ಆಹಾರ ಇಲಾಖೆ
Published on
ಬೆಂಗಳೂರು: ಪಡಿತರ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ತಡೆಗೆ ಮುಂದಾಗಿರುವ ಆಹಾರ ಇಲಾಖೆ, ಎಲ್ಲ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಕಡ್ಡಾಯವಾಗಿ ತೆರೆಯಬೇಕೆಂದು ಆದೇಶಿಸಿದೆ.
ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಪೂರೈಕೆಯಾಗಿದ್ದರೂ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಜುಲೈ ತಿಂಗಳ ಪಡಿತರವು ಬಹುತೇಕ ನ್ಯಾಯಬೆಲೆ ಅಂಗಡಿಗಳಿಗೆ ಈಗಾಗಲೇ ಪೂರೈಕೆಯಾಗಿದೆ. ಈ ತಿಂಗಳ ಅಂತ್ಯದ ಒಳಗೆ ಎಲ್ಲ ಫಲಾನುಭವಿಗಳಿಗೂ ಪಡಿತರ ವಿತರಿಸಬೇಕಿದೆ. ಇದಕ್ಕಾಗಿ ಎಲ್ಲ ಅಂಗಡಿಗಳು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದೆ.
ಇಲಾಖೆಯ ಹೆಚ್ಚುವರಿ ನಿರ್ದೇಶಕರು ಎಲ್ಲ ಜಂಟಿ ಮತ್ತು ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದು, ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಈ ಆದೇಶವನ್ನು ಉಲ್ಲಂಘಿಸುವ ನ್ಯಾಯಬೆಲೆ ಅಂಗಡಿಗಳ ವಿತರಕರ ವಿರುದ್ಧ ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್, 10.80 ಲಕ್ಷ ಅಂತ್ಯೋದಯ ಕಾರ್ಡ್‌ಗಳಿಂದ ಒಟ್ಟು 4.11 ಕೋಟಿ ಲಾನುಭವಿಗಳು ಇದ್ದಾರೆ. ಪ್ರತಿ ತಿಂಗಳು 20,168 ನ್ಯಾಯಬೆಲೆ ಅಂಗಡಿಗಳಿಂದ ತಿಂಗಳಿಗೆ 4.34 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥವನ್ನು ಕಾರ್ಡ್‌ದಾರರಿಗೆ ವಿತರಿಸಬೇಕಿದೆ.
ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ’ ಹಾಗೂ ರಾಜ್ಯ ಸರ್ಕಾರದ ‘ಅನ್ನಭಾಗ್ಯ’ಯೋಜನೆಯಡಿ ತಲಾ 5 ಕೆಜಿ ಸೇರಿ ಒಟ್ಟು 10 ಕೆಜಿ ಆಹಾರ ಪದಾರ್ಥ ಬಿಪಿಎಲ್ ಹೊಂದಿರುವ ಪ್ರತಿ ಸದಸ್ಯನಿಗೆ ಉಚಿತವಾಗಿ ನೀಡಲಾಗುತ್ತಿದೆ. ಅಂತ್ಯೋದಯ ಕಾರ್ಡ್‌ಗೆ 20 ಕೆಜಿ ಅಕ್ಕಿ, 15 ಕೆಜಿ ರಾಗಿ ಸೇರಿ ಒಟ್ಟು 35 ಕೆಜಿ ವಿತರಿಸಲಾಗುತ್ತಿದೆ. 10 ವರ್ಷಗಳಿಂದ ಪಡಿತರ ವಿತರಣೆಗೆ ನಿರಂತರವಾಗಿ ಸರ್ವರ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಶೇ.100 ಪಡಿತರ ವಿತರಣೆಯ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನ್ಯಾಯಬೆಲೆ ಅಂಗಡಿ ಸಮಯ ಬದಲಾಯಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net